"ರಾಜಕೀಯದಲ್ಲಿ ಪೂರ್ಣ ವಿರಾಮವಿಲ್ಲ": ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ,ಮಾ.18: ಎಪ್ರಿಲ್ ಮತ್ತು ಜುಲೈ ನಡುವೆ ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ 59 ಸದಸ್ಯರಿಗೆ ಬುಧವಾರ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಸಂಸತ್ತನ್ನು ಮುಕ್ತ ವಿಶ್ವವಿದ್ಯಾಲಯ’ ಎಂದು ಬಣ್ಣಿಸಿದರು. ರಾಷ್ಟ್ರೀಯ ಜೀವನಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುವಂತೆ ಅವರು ನಿವೃತ್ತರಾಗುತ್ತಿರುವ ಸಂಸದರನ್ನು ಆಗ್ರಹಿಸಿದರು.
ದ್ವೈವಾರ್ಷಿಕ ವಿದಾಯ ಸಂದರ್ಭದಲ್ಲಿ ಮೇಲ್ಮನೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಇಂತಹ ಕ್ಷಣಗಳು ಸ್ವಾಭಾವಿಕವಾಗಿಯೇ ಪಕ್ಷಗಳ ಎಲ್ಲೆಗಳನ್ನು ಮೀರಿ ನಮ್ಮನ್ನು ಭಾವನಾತ್ಮಕವಾಗಿಸುತ್ತವೆ. ನಮ್ಮ ಸಹೋದ್ಯೋಗಿಗಳು ಈಗ ಇತರ ಹೊಣೆಗಳನ್ನು ವಹಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂಬ ಅರಿವು ನಮ್ಮೆಲ್ಲರಲ್ಲೂ ನಾವು ಹಂಚಿಕೊಂಡಿರುವ ಭಾವನೆಯನ್ನು ಮೂಡಿಸುತ್ತದೆ ’ ಎಂದರು.
‘ರಾಜಕೀಯದಲ್ಲಿ ಪೂರ್ಣ ವಿರಾಮ ಎನ್ನುವುದೇ ಇಲ್ಲ. ಭವಿಷ್ಯವು ನಿಮಗಾಗಿ ಕಾಯುತ್ತಿದೆ ಮತ್ತು ನಿಮ್ಮ ಅನುಭವ ನಮ್ಮ ರಾಷ್ಟ್ರೀಯ ಜೀವನದ ಶಾಶ್ವತ ಭಾಗವಾಗಿ ಉಳಿಯುತ್ತದೆ ’ ಎಂದು ರಾಜ್ಯಸಭೆಗೆ ಮರಳಲು ಯೋಜಿಸದ ಸದಸ್ಯರಿಗೆ ಅವರು ಭರವಸೆ ನೀಡಿದರು.
ಮೂವರು ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ವಿಶೇಷವಾಗಿ ಪ್ರಶಂಸಿಸಿದ ಮೋದಿ ಅವರನ್ನು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಸಂಸದೀಯ ಕಲಾಪಗಳಿಗೆ ಮುಡುಪಾಗಿಟ್ಟ ದಿಗ್ಗಜರು ಎಂದು ಬಣ್ಣಿಸಿದರು.
ಅವರು ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ಸಂಸತ್ತಿಗೆ ಹಾಜರಾಗುತ್ತಿದ್ದ ರೀತಿ ನಿಜಕ್ಕೂ ಅನುಕರಣೀಯವಾಗಿದೆ,ಇಂತಹ ಮನೋಭಾವವನ್ನು ಎಲ್ಲ ಹೊಸ ಸಂಸದರು ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತರಾಗುತ್ತಿರುವ ಉಪ ಸಭಾಪತಿ ಹರಿವಂಶ ಅವರಿಗೂ ಗೌರವ ಸಲ್ಲಿಸಿದ ಪ್ರಧಾನಿ, ಅವರನ್ನು ಸಜ್ಜನ ಮತ್ತು ಮೃದುಭಾಷಿ, ಆದರೂ ಕಠಿಣ ನಿಲುವಿನ ವ್ಯಕ್ತಿ ಎಂದು ಬಣ್ಣಿಸಿದರು. ಹರಿವಂಶ ಅವರು ತನ್ನ ವಿರಾಮದ ಅವಧಿಗಳಲ್ಲಿ ದೇಶಾದ್ಯಂತ ಪ್ರಯಾಣಿಸುವುದನ್ನು ಮಂದುವರಿಸಿದ್ದರು ಮತ್ತು ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಯುವಕರೊಂದಿಗೆ ತೊಡಗಿಸಿಕೊಂಡಿದ್ದರು ಎಂದರು.
ಲಘು ಧಾಟಿಯಲ್ಲಿ ಮಾತನಾಡಿದ ಮೋದಿ ಕೇಂದ್ರ ಸಚಿವ ರಾಮದಾಸ ಆಠವಳೆಯವರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ‘ ಸದನದಲ್ಲಿ ಹಾಸ್ಯಮತ್ತು ವಿಡಂಬನೆಗೆ ಬಹಳಷ್ಟು ಅವಕಾಶವಿದೆ ಎಂದು ನಾವು ಕೇಳುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಅದು ಬಹುಶಃ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ನಮ್ಮ ಆಠವಳೆಜಿ ನಿಜಕ್ಕೂ ನಿತ್ಯ ಹರಿದ್ವರ್ಣರು’ ಎಂದು ಹೇಳುವ ಮೂಲಕ ಸದನದಲ್ಲಿ ನಗು ಮೂಡಿಸಿದರು.
‘ಅವರು ನಿರ್ಗಮಿಸುತ್ತಿದ್ದಾರೆ,ಆದರೆ ಯಾರೂ ಶೂನ್ಯಭಾವವನ್ನು ಅನುಭವಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ. ಅವರು ದಣಿವರಿಯದೆ ಸೇವೆ ಸಲ್ಲಿಸುತ್ತಲೇ ಇರುತ್ತಾರೆ’ ಎಂದು ಮೋದಿ ಹೇಳಿದರು.
ಸಂಸತ್ತಿನ ದ್ವಿಸಭಾ ವ್ಯವಸ್ಥೆಯನ್ನು ಉಲ್ಲೇಖಿಸಿದ ಮೋದಿ, ಉಭಯ ಸದನಗಳ ನಡುವೆ ಶಾಸನ ಅಂಗೀಕಾರವನ್ನು ‘ಎರಡನೇ ಅಭಿಪ್ರಾಯ’ ಕೋರುವುದಕ್ಕೆ ಹೋಲಿಸಿದರು. ಇದು ಪ್ರಜಾಪ್ರಭುತ್ವದಲ್ಲಿ ನಿರ್ಧಾರ ಕೈಗೊಳ್ಳುವಿಕೆಯನ್ನು ಬಲಪಡಿಸುವ ಪ್ರಕ್ರಿಯೆಯಾಗಿದೆ ಎಂದರು.
ನಿರ್ಗಮಿಸುತ್ತಿರುವ ಕೆಲವು ಸದಸ್ಯರು ಹಳೆಯ ಮತ್ತು ಹೊಸ ಸಂಸತ್ ಕಟ್ಟಡಗಳಲ್ಲಿ ಸೇವೆ ಸಲ್ಲಿಸಿದ ಅಪರೂಪದ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದು ಮೋದಿ ಬೆಟ್ಟು ಮಾಡಿದರು.







