ಸಾಕ್ಷಿಗೆ ಕನಿಷ್ಠ ವಯಸ್ಸು ಇಲ್ಲ: ಮಕ್ಕಳ ಸಾಕ್ಷ್ಯಕ್ಕೆ ಸುಪ್ರೀಂ ಕೋರ್ಟ್ ಅಸ್ತು

Photo | PTI
ಹೊಸದಿಲ್ಲಿ: ಸಾಕ್ಷಿ ಕಟಕಟೆಯಲ್ಲಿ ಮಕ್ಕಳು ಒದಗಿಸುವ ಪುರಾವೆ ಕೂಡಾ ಇತರರು ಒದಗಿಸುವ ಸಾಕ್ಷ್ಯದಷ್ಟೇ ಮೌಲಿಕ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕೋರ್ಟ್ ಇದಕ್ಕಾಗಿ ಘಟನೆಗೆ ಸಾಕ್ಷಿಯಾಗಿದ್ದ ಏಳು ವರ್ಷದ ಪುತ್ರಿಯ ಸಾಕ್ಷ್ಯವನ್ನು ಪರಿಗಣಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ, ಆರೋಪಿಯನ್ನು ಖುಲಾಸೆಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದೆ. ತಾಯಿಯ ಹತ್ಯೆಯಾದಾಗ ಮನೆಯಲ್ಲಿದ್ದ ಪುತ್ರಿಯ ಹೇಳಿಕೆಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿತ್ತು.
ಸಾಕ್ಷಿಗಳಿಗೆ ಯಾವುದೇ ಕನಿಷ್ಠ ವಯಸ್ಸನ್ನು ಪುರಾವೆಗಳ ಕಾಯ್ದೆ ನಿರ್ದಿಷ್ಟಪಡಿಸಿಲ್ಲ ಹಾಗು ಮಗುವಿನ ಸಾಕ್ಷ್ಯವನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
"ಬಾಲ ಸಾಕ್ಷಿಗಳ ಸಾಕ್ಷ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ವಹಿಸಬೇಕಾದ ಏಕೈಕ ಮುನ್ನೆಚ್ಚರಿಕೆಯೆಂದರೆ ಸಾಕ್ಷಿ ವಿಶ್ವಾಸಾರ್ಹವಾಗಿರಬೇಕು ಮತ್ತು ಬೇರೆಯವರ ಬೋಧನೆಗೆ ಮಗು ಒಳಗಾಗಿರಬಾರದು" ಎಂದು ವಿಶ್ಲೇಷಿಸಿದೆ.
ಆದಾಗ್ಯೂ ಮಕ್ಕಳ ಸಾಕ್ಷ್ಯವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂಬ ಯಾವಮಾರ್ಗಸೂಚಿಯೂ ಇಲ್ಲ. ಅದರೆ ಇದನ್ನು ಪರಿಶೀಲಿಸಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಮಗುವಿನ ಸಾಕ್ಷ್ಯವನ್ನು ಶ್ಲಾಘಿಸಿದ ಕೋರ್ಟ್, ಮಕ್ಕಳ ಸಾಕ್ಷ್ಯವು ಸ್ವಯಂ ಅಭಿವ್ಯಕ್ತಿಯೇ ಹಾಗೂ ಇತರರ ಪ್ರಭಾವಕ್ಕೆ ಒಳಗಾಗಿಲ್ಲವೇ ಅಥವಾ ಸಾಕ್ಷಿದಾರರು ವಿಶ್ವಾಸದಿಂದ ಮಾತನಾಡುತ್ತಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.







