ಬಿಜೆಡಿ ಆಡಳಿತದಲ್ಲಿ ನನ್ನ ಹತ್ಯೆಗೆ ಪ್ರಯತ್ನ ನಡೆದಿತ್ತು: ಒಡಿಶಾ ಸಿಎಂ

ಕಿಯೊಂಝಾರ್ (ಒಡಿಶಾ): "ರಾಜ್ಯದಲ್ಲಿ ಈ ಹಿಂದಿನ ಬಿಜೆಡಿ ಸರ್ಕಾರದ ಆಡಳಿತಾವಧಿಯಲ್ಲಿ ಬಾಂಬ್ ಎಸೆಯುವ ಮೂಲಕ ನನ್ನ ಹತ್ಯೆಗೆ ಪ್ರಯತ್ನ ನಡೆದಿತ್ತು" ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಗಂಭೀರ ಆರೋಪ ಮಾಡಿದ್ದಾರೆ.
ಕಿಯೊಂಝಾರ್ ಜಿಲ್ಲೆಯ ಝೂಂಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಹಿರಿಯ ಬಿಜೆಪಿ ಮುಖಂಡ ಮಾಝಿ, "ಕಿಯೊಂಝಾರ್ ನ ಮಂಡ್ವಾದಲ್ಲಿ ಬಾಂಬ್ ಸ್ಫೋಟ ನಡೆಸಿ ನನ್ನನ್ನು ಹತ್ಯೆ ಮಾಡುವ ಯತ್ನ ನಡೆದಿತ್ತು. ಆದರೆ ದೇವರ ದಯೆಯಿಂದ ಮತ್ತು ಜನರ ಪ್ರೀತಿಯಿಂದ ನಾನು ಉಳಿದುಕೊಂಡೆ" ಎಂದು ಹೇಳಿದರು.
"ನಾನು ಜನರ ಮುಖ್ಯಮಂತ್ರಿ, ಯಾರನ್ನು ಭೇಟಿ ಮಾಡುವುದಕ್ಕೂ ಸಮಸ್ಯೆ ಇಲ್ಲ. ಅಗತ್ಯವಿದ್ದರೆ ಭುವನೇಶ್ವರಕ್ಕೆ ಬನ್ನಿ. ಜನರನ್ನು ನಾನು ನೇರ ಭೇಟಿ ಮಾಡುತ್ತೇನೆ" ಎಂದರು. ಇಂದು ನನಗೆ ಸಂತೋಷವಾಗಿರುವುದಕ್ಕೆ ಮತ್ತು ಸಂಭ್ರಮಿಸುವುದಕ್ಕೆ ಅವಕಾಶ ಸಿಕ್ಕಿದೆ ಎಂದ ಅವರು, ತಾಯಿಯ ಜತೆ ಬಾಲ್ಯದಲ್ಲಿ ಝೂಂಪುರ ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದ ಕ್ಷಣಗಳನ್ನು ಮೆಲುಕು ಹಾಕಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ 3100 ರೂಪಾಯಿ ಬೆಂಬಲ ಬೆಲೆ ನೀಡುವುದು ಮತ್ತು ಎಲ್ಲ ಅರ್ಹ ಮಹಿಳೆಯರಿಗೆ ಸುಭದ್ರಾ ಯೋಜನೆಯಡಿ 50 ಸಾವಿರ ರೂಪಾಯಿಗಳನ್ನು ನೀಡುವುದು ನನ್ನ ಆದ್ಯತೆ ಎಂದು ಸ್ಪಷ್ಟಪಡಿಸಿದರು.







