18 ತಾಸುಗಳವರೆಗೆ ಹೊರಜಗತ್ತಿನೊಂದಿಗೆ ಸಂಪರ್ಕವೇ ಇರಲಿಲ್ಲ ; ಕಾರ್ಮಿಕ ಅಖಿಲೇಶ್ ಸಿಂಗ್
ಸುರಂಗದೊಳಗೆ ಇನ್ನೂ 25 ದಿನಕ್ಕಾಗುವ ಆಹಾರ ದಾಸ್ತಾನಿದೆ!

Photo: PTI
ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗಮಾರ್ಗದಲ್ಲಿ 17 ದಿನಗಳ ಕಾಲ ಸಿಲುಕಿಕೊಂಡು, ಮಂಗಳವಾರ ರಕ್ಷಿಸಲ್ಪಟ್ಟ ಕಾರ್ಮಿಕರಲ್ಲೊಬ್ಬರಾದ ಅಖಿಲೇಶ್ ಸಿಂಗ್ ಅವರು ದುರಂತದ ಅನುಭವಗಳನ್ನು ಪಿಟಿಐ ಸುದ್ದಿಸಂಸ್ಥೆ ಜೊತೆ ಹಂಚಿಕೊಂಡಿದ್ದಾರೆ.
‘‘ನನ್ನ ಎದುರಿಗೇ ಸುರಂಗ ಮಾರ್ಗ ಕುಸಿದುಬಿದ್ದಿತ್ತು ಹಾಗೂ ಅದರ ಸದ್ದಿಗೆ ನನ್ನ ಕಿವಿಗಳು ಕಿವುಡಾದಂತಾಯಿತು’’ ಎಂದು ಅವರು ಹೇಳುತ್ತಾರೆ.
‘‘ಆನಂತರ 18 ತಾಸುಗಳವರೆಗೆ ನಮಗೆ ಬಾಹ್ಯಜಗತ್ತಿನೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ನಮಗೆ ತರಬೇತಿ ನೀಡಿದಂತೆ, ನಾವು ಸುರಂಗಮಾರ್ಗದೊಳಗೆ ಸಿಲುಕಿಕೊಂಡ ಕೂಡಲೇ ನೀರಿನ ಪೈಪ್ ಅನ್ನು ತೆರೆದಿದ್ದರಿಂದ ನೀರು ಸೋರತೊಡಗಿತು. ಆಗ ಹೊರಗಿರುವ ಜನರಿಗೆ, ಸುರಂಗ ಮಾರ್ಗದೊಳಗೆ ಜನರು ಸಿಕ್ಕಿಹಾಕಿಕೊಂಡಿದ್ದಾರೆಂಬುದು ಅರಿವಾಯಿತು ಹಾಗೂ ಕೂಡಲೇ ಪೈಪ್ ಮೂಲಕ ಆಮ್ಲಜನಕವನ್ನು ಕಳುಹಿಸಲು ಆರಂಭಿಸಿದರು’’ ಎಂದು ಅವರು ತಿಳಿಸಿದರು.
ಅವಶೇಷಗಳ ಮಧ್ಯದಿಂದ ಉಕ್ಕಿನ ಪೈಪ್ ಅನ್ನು ಅಳವಡಿಸಲು ರಕ್ಷಣಾ ಕಾರ್ಯಕರ್ತರು ಸಫಲರಾದ ಆನಂತರ ಅವರು ಅದರ ಮೂಲಕ ದಿನವಿಡೀ ಆಹಾರವನ್ನು ಕಳುಹಿಸತೊಡಗಿದರು. ಸುರಂಗದಲ್ಲಿ ಆಹಾರ ಎಷ್ಟು ದಾಸ್ತಾನಾಗಿತ್ತೆಂರೆ ಇನ್ನೂ 25 ದಿನಗಳಿಗೆ ಸಾಕಾಗುವಷ್ಟಿದೆಯೆಂದು ಸಿಂಗ್ ಹೇಳಿದರು.
ತಾನೀಗ ಮನೆಗೆ ಹೋಗಿ ಅಲ್ಲಿ ಒಂದೆರಡು ತಿಂಗಳು ವಿಶ್ರಾಂತಿ ಪಡೆಯುವ ಯೋಜನೆಯನ್ನು ಹೊಂದಿರುವುದಾಗಿ ಅವರು ಹೇಳುತ್ತಾರೆ.
ಉತ್ತರಕಾಶಿಯಿಂದ 30 ಕಿ.ಮೀ. ದೂರದಲ್ಲಿರುವ ಸಿಲ್ಕ್ಯಾರಾ ಸುರಂಗಮಾರ್ಗವು, ಕೇಂದ್ರ ಸರಕಾರದ 889 ಕಿ.ಮೀ. ವಿಸ್ತೀರ್ಣದ ಛಾರ್ಧಾಮ್ ಸರ್ವಋತು ರಸ್ತೆ ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳುತ್ತಿತ್ತು.
ನವೆಂಬರ್ 12ರಂದು ಸಂಭವಿಸಿದ ಭೂಕುಸಿತದಿಂದಾಗಿ ಸುರಂಗಮಾರ್ಗವು ಪ್ರವೇಶದ್ವಾರದಿಂದ ಸುಮಾರು 200 ಮೀಟರ್ವರೆಗೆ ಕುಸಿದುಬಿದ್ದಿದ್ದು, ಅಲ್ಲಿದ್ದ 41 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು.







