ಈ ಬಾರಿ ಶೇ. 90ರಷ್ಟು ಮಳೆ: ಹವಾಮಾನ ಇಲಾಖೆ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಮೇ 29: ಭಾರತದಲ್ಲಿ ಜೂನ್-ಸೆಪ್ಟೆಂಬರ್ ಅವಧಿಯ ನೈಋತ್ಯ ಮುಂಗಾರು ವೇಳೆ, ದೀರ್ಘಾವಧಿ ಸರಾಸರಿಯ ಶೇ. 90ರಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಈಶಾನ್ಯ ಭಾರತದಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದ್ದರೆ, ದೇಶದ ಉಳಿದ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು ಎಂದು ಹವಾಮಾನ ಕಚೇರಿ ಹೇಳಿದೆ.
1971ರಿಂದ 2020ರವರೆಗಿನ ಮಳೆ ದತ್ತಾಂಶವನ್ನು ಆಧರಿಸಿ, ಮಳೆಯ ದೀರ್ಘಾವಧಿ ಸರಾಸರಿಯನ್ನು ಲೆಕ್ಕ ಹಾಕಲಾಗುತ್ತದೆ. ಹಾಲಿ ಮುಂಗಾರಿನ ದೀರ್ಘಾವಧಿ ಸರಾಸರಿಯು 87 ಸೆಂ.ಮೀ. ಆಗಿದೆ.
ದೇಶದ ಬಹುಪಾಲು ಮಳೆ ಆಧಾರಿತ ಕೃಷಿ ಪ್ರದೇಶಗಳನ್ನು ಒಳಗೊಂಡ ವಲಯಗಳಲ್ಲಿ ನೈಋತ್ಯ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ದೇಶದ ಸರಾಸರಿ ಮಳೆಯು ದೀರ್ಘಾವಧಿ ಸರಾಸರಿಯ ಶೇ. 92ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ.
ಮುಂಗಾರು ಹಂಗಾಮಿನಲ್ಲಿ ಮಳೆಯು ದೀರ್ಘಾವಧಿ ಸರಾಸರಿಯ ಶೇ. 90ಕ್ಕಿಂತ ಕಡಿಮೆಯಾದರೆ, ಹವಾಮಾನ ಇಲಾಖೆಯು ಅದನ್ನು ‘ಕೊರತೆ’ ಎಂದು ವರ್ಗೀಕರಿಸುತ್ತದೆ.
ಜೂನ್ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಮಾಸಿಕ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ಮುಂಗಾರು ಪ್ರವೇಶ ಆಗಿಲ್ಲ
ಕೇರಳಕ್ಕೆ ಮುಂಗಾರು ಪ್ರವೇಶಿಸುವ ಬಗ್ಗೆ ಮಾತನಾಡಿದ ಮಹಾಪಾತ್ರ, ಮುಂದಿನ ಏಳು ದಿನಗಳಲ್ಲಿ ಇದು ಸಂಭವಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸುತ್ತದೆ. ಇದು ದೇಶದಲ್ಲಿ ನೈಋತ್ಯ ಮುಂಗಾರು ಹಂಗಾಮಿನ ಆರಂಭವನ್ನು ಸೂಚಿಸುತ್ತದೆ.
ಜೂನ್ನಲ್ಲಿ ಎಲ್ ನಿನೋ ಪರಿಸ್ಥಿತಿಯು ದುರ್ಬಲವಾಗಿರಲಿದ್ದು, ಸೆಪ್ಟೆಂಬರ್ನಲ್ಲಿ ಸಾಧಾರಣದಿಂದ ತೀವ್ರ ರೂಪಕ್ಕೆ ತಿರುಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.






