ಮಾಲಿಯಲ್ಲಿ ಮೂವರು ಭಾರತೀಯರ ಅಪಹರಣ: ತುರ್ತು ಕ್ರಮಕ್ಕೆ ಆಗ್ರಹ

ಹೊಸದಿಲ್ಲಿ: ಭಯೋತ್ಪಾದಕ ದಾಳಿಯಿಂದ ಕಂಗೆಟ್ಟಿರುವ ಮಾಲಿಯಲ್ಲಿ ಮೂವರು ಭಾರತೀಯ ಕಾರ್ಮಿಕರನ್ನು ಅಪಹರಿಸಲಾದ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕಯೇಸ್ ನ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಕಾರ್ಮಿಕರನ್ನು ಜುಲೈ 1ರಂದು ಫ್ಯಾಕ್ಟರಿ ಆವರಣದಲ್ಲಿ ನಡೆದ ಸಂಘಟಿತ ದಾಳಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ.
ಅಪಹೃತ ಕಾರ್ಮಿಕರನ್ನು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ಬಿಡುಗಡೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಅಧಿಕೃತವಾಗಿ ಒತ್ತಾಯಿಸಿದೆ. "ಈ ಘಟನೆ ಜುಲೈ 1ರಂದು ನಡೆದಿದ್ದು, ಸಶಸ್ತ್ರ ದಾಳಿಕೋರರು ಫ್ಯಾಕ್ಟರಿ ಆವರಣದ ಮೇಲೆ ಸಂಘಟಿತ ದಾಳಿ ನಡೆಸಿ ಬಲವಂತವಾಗಿ ಭಾರತೀಯರನ್ನು ಒತ್ತೆಯಾಳುಗಳಾಗಿ ಒಯ್ದಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಅಪಹರಣದ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತಿಲ್ಲವಾದರೂ, ಮಾಲಿಯಲ್ಲಿ ಅದೇ ದಿನ ನಡೆದ ಹಲವು ದಾಳಿ ಘಟನೆಗಳ ಹೊಣೆಯನ್ನು ಅಲ್ ಖೈದಾ ಸಹ ಸಂಘಟನೆಯಾದ ಜಮಾತ್ ನಸ್ರತ್ ಅಲ್ ಇಸ್ಲಾಂ ವಲ್ ಮುಸ್ಲಿಮಿನ್ (ಜೆಎನ್ಐಎಂ) ಹೊತ್ತಿದೆ.
ಬಮಾಕೊದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಜತೆ ಮತ್ತು ಡೈಮಂಡ್ ಸಿಮೆಂಟ್ ಫ್ಯಾಕ್ಟರಿ ಆಡಳಿತ ಮಂಡಳಿ ಜತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಪಹೃತರ ಕುಟುಂಬಗಳ ಸಂಪರ್ಕದಲ್ಲೂ ಇದ್ದೇವೆ ಎಂದು ಸ್ಪಷ್ಟಪಡಿಸಿದೆ.







