ಹಳೆ ದಿಲ್ಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ: ಇಬ್ಬರು ಮೃತ್ಯು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ರಕ್ಷಣಾ ಕಾರ್ಯಾಚರಣೆ (Photo: ANI)
ಹೊಸದಿಲ್ಲಿ: ಹಳೆಯ ದಿಲ್ಲಿಯ ಚಾವರಿ ಬಜಾರ್ ನಲ್ಲಿ ಗುರುವಾರ ಬೆಳಿಗ್ಗೆ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಅವೇಶಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಚಾವರಿ ಬಜಾರ್ ಮೆಟ್ರೊ ನಿಲ್ದಾಣದ ಸಮೀಪದ 'ಗಲಿ ಸಿತಾರಾ' ಪ್ರದೇಶದಲ್ಲಿ ಬೆಳಿಗ್ಗೆ 9.50ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು PTI ವರದಿ ಮಾಡಿದೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಮತ್ತು ರಕ್ಷಣಾ ವಾಹನಗಳು ಸೇರಿದಂತೆ ಕನಿಷ್ಠ ಆರು ಅಗ್ನಿಶಾಮಕ ದಳದ ಘಟಕಗಳು ಸ್ಥಳಕ್ಕೆ ಧಾವಿಸಿವೆ. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ದಿಲ್ಲಿಯಲ್ಲಿ ದೀಪಾವಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ. ಚಾಂದನಿ ಚೌಕ್ ಮತ್ತು ಚಾವರಿ ಬಜಾರ್ ನಂತಹ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಸೇರುತ್ತಾರೆ.




