ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ: ಮುಂಬೈ ಮತ್ತೆ 90ರ ದಶಕದ ದಾವೂದ್ ಕಾಲದ ಭೂಗತ ಜಗತ್ತಿನತ್ತ?
► ಬಾಬಾ ಸಿದ್ದಿಕಿ ಹತ್ಯೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ವಿಸ್ತರಣೆಯ ಪ್ರಯತ್ನ; ಬಾಲಿವುಡ್ ತಾರೆಯರ ಸುರಕ್ಷತೆ ಬಗ್ಗೆ ಹೆಚ್ಚಿದ ಆತಂಕ ► ಶಮ್ಸ್ ತಾಹಿರ್ ಖಾನ್ - India Today ವರದಿ

Photo credit : indiatoday
ಮುಂಬೈ: ಒಂದು ಕಾಲದಲ್ಲಿ ಗ್ಯಾಂಗ್ವಾರ್ಗಳು, ಸುಲಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿದ್ದ ಗುಂಡಿನ ದಾಳಿಗಳಿಂದ ತತ್ತರಿಸಿದ್ದ ಮುಂಬೈನಲ್ಲಿ ಭೂಗತ ಜಗತ್ತು ಮತ್ತೆ ತಲೆ ಎತ್ತುತ್ತಿದೆಯೇ? ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿ ಈ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. 1990ರ ದಶಕದಲ್ಲಿ ದಾವೂದ್ ಇಬ್ರಾಹಿಂ ಸೇರಿದಂತೆ ಹಲವು ಡಾನ್ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ನಗರದಲ್ಲಿ, ದಶಕಗಳ ಕಠಿಣ ಪೊಲೀಸ್ ಕಾರ್ಯಾಚರಣೆಗಳ ಬಳಿಕ ಭೂಗತ ಜಗತ್ತಿನ ಪ್ರಭಾವ ಗಣನೀಯವಾಗಿ ಕುಸಿದಿತ್ತು. ಆದರೆ, ಇತ್ತೀಚಿನ ಘಟನೆಗಳು ಮತ್ತೆ ಆತಂಕ ಮೂಡಿಸಿವೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮುಂಬೈನಲ್ಲಿ ತನ್ನ ನೆಲೆ ವಿಸ್ತರಿಸಲು ಪ್ರಯತ್ನಿಸುತ್ತಿದೆಯೇ ಎಂಬುದು ಈಗಿನ ಪ್ರಮುಖ ಪ್ರಶ್ನೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯನ್ನು ಈ ಗ್ಯಾಂಗ್ ಗೆ ಸಂಬಂಧಿಸಿದ್ದು ಎಂದು ಮುಂಬೈ ಪೊಲೀಸರು ಹೇಳಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಭೂಗತ ಜಗತ್ತಿನ ನೆರಳಿನಲ್ಲಿ ಮುಂಬೈ :
1990ರ ದಶಕದ ಆರಂಭದಲ್ಲಿ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪೆನಿ ಮುಂಬೈ ಭೂಗತ ಜಗತ್ತಿನಲ್ಲಿ ಪ್ರಬಲವಾಗಿತ್ತು. ಗ್ಯಾಂಗ್ ವಾರ್ ಗಳು ಮತ್ತು ಪೊಲೀಸ್ ಎನ್ಕೌಂಟರ್ ಗಳು ಆಗಾಗ್ಗೆ ಮಾರಣಾಂತಿಕವಾಗುತ್ತಿದ್ದವು. ಬಾಲಿವುಡ್ ಉದ್ಯಮಿಗಳು, ಬಿಲ್ಡರ್ ಗಳು, ಬಾರ್ ಮಾಲೀಕರು ಸೇರಿದಂತೆ ಹಲವು ವಲಯಗಳ ಜನರು ಸುಲಿಗೆ ಬೆದರಿಕೆ ಎದುರಿಸುತ್ತಿದ್ದರು.
ಭೂಗತ ಜಗತ್ತನ್ನು ಮಟ್ಟಹಾಕಲು ಪೊಲೀಸರು ನಡೆಸಿದ ಎನ್ಕೌಂಟರ್ ಗಳಲ್ಲಿ 500ಕ್ಕೂ ಹೆಚ್ಚು ಗ್ಯಾಂಗ್ ಸ್ಟರ್ ಗಳು ಹತರಾದರು. ಇದೇ ಅವಧಿಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು 'ಎನ್ ಕೌಂಟರ್ ಸ್ಪೆಷಲಿಸ್ಟ್'ಗಳಾಗಿ ಗುರುತಿಸಿಕೊಂಡರು. ಸಂಘಟಿತ ಅಪರಾಧಗಳನ್ನು ನಿಯಂತ್ರಿಸಲು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (MCOCA) ಜಾರಿಗೊಳಿಸಲಾಯಿತು.
ಈ ಕ್ರಮಗಳ ಪರಿಣಾಮವಾಗಿ ಸಾವಿರಾರು ಗ್ಯಾಂಗ್ ಸ್ಟರ್ ಗಳು ಜೈಲು ಸೇರಿದರು. ಹೊಸ ಸಹಸ್ರಮಾನದ ಆರಂಭದ ವೇಳೆಗೆ ಮುಂಬೈ ಭೂಗತ ಜಗತ್ತಿನ ಹಿಡಿತದಿಂದ ನಿಧಾನವಾಗಿ ಹೊರಬರತೊಡಗಿತು.
ಡಾನ್ ಗಳ ಪ್ರಾಬಲ್ಯಕ್ಕೆ ಕುಸಿತ :
ಡಿ-ಕಂಪೆನಿ ಮುಂಬೈನಲ್ಲಿ ನಡೆಸಿದ ಕೊನೆಯ ಗುಂಡಿನ ದಾಳಿ 2002ರ ನವೆಂಬರ್ ನಲ್ಲಿ ನಡೆದಿತ್ತು ಎಂದು ವರದಿ ಉಲ್ಲೇಖಿಸುತ್ತದೆ. ಅರುಣ್ ಗಾವ್ಲಿ ಗ್ಯಾಂಗ್ 2008ರಲ್ಲಿ ನಗರದಲ್ಲಿ ಕೊನೆಯ ಕೊಲೆ ಎಸಗಿತ್ತು. ಕ್ರೈಂ ಪತ್ರಕರ್ತ ಜೆ. ಡೇ ಅವರ 2011ರ ಹತ್ಯೆ ಛೋಟಾ ರಾಜನ್ ಗ್ಯಾಂಗ್ ಗೆ ಸಂಬಂಧಿಸಿದ ಕೊನೆಯ ಕೊಲೆಯಾಗಿತ್ತು ಎಂದು ವರದಿ ತಿಳಿಸುತ್ತದೆ.
ಅಶ್ವಿನ್ ನಾಯಕ್ ಭೂಗತ ಜಗತ್ತನ್ನು ತೊರೆದು ಬಿಲ್ಡರ್ ಆದರು. ಅಬು ಸಲೇಂ ಬಂಧನದ ಬಳಿಕ ಆತನ ಗ್ಯಾಂಗ್ ದುರ್ಬಲಗೊಂಡಿತು. ಛೋಟಾ ರಾಜನ್, ಅಬು ಸಲೇಂ ಮತ್ತು ಅರುಣ್ ಗಾವ್ಲಿ ಸೇರಿದಂತೆ ಹಲವು ಪ್ರಮುಖ ಗ್ಯಾಂಗ್ಸ್ಟರ್ ಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ದಾವೂದ್ ನ ಸಹೋದರ ಇಕ್ಬಾಲ್ ಕಸ್ಕರ್ ನನ್ನು 2003ರಲ್ಲಿ ದುಬೈನಿಂದ ಭಾರತಕ್ಕೆ ಕರೆತಂದ ಬಳಿಕ ಡಿ-ಕಂಪೆನಿಯ ಮುಂಬೈ ಚಟುವಟಿಕೆಗಳು ಮತ್ತಷ್ಟು ಕುಂಠಿತಗೊಂಡವು. ಹೀಗಾಗಿ, ಭೂಗತ ಜಗತ್ತು ಮುಂಬೈಗೆ ಬಹುತೇಕ ಹಿಂದಿನ ನೆನಪಾಗಿ ಉಳಿದಿತ್ತು.
ಬಾಬಾ ಸಿದ್ದಿಕಿ ಹತ್ಯೆಯ ಹಿಂದಿನ ಉದ್ದೇಶವೇನು? :
ಬಾಬಾ ಸಿದ್ದಿಕಿ ಹತ್ಯೆಯ ಹಿಂದಿನ ಉದ್ದೇಶ ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ನಟ ಸಲ್ಮಾನ್ ಖಾನ್ ಅವರನ್ನು ಬೆದರಿಸುವ ಉದ್ದೇಶದಿಂದ ಈ ಕೊಲೆ ನಡೆದಿದೆ ಎಂಬುದನ್ನು ಅನೇಕರು ಸುಲಭವಾಗಿ ನಂಬಿರಲಿಲ್ಲ. ಆದರೆ, ಮುಂಬೈ ಪೊಲೀಸರು ಹತ್ಯೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಸಂಬಂಧಿಸಿದ್ದು ಎಂದು ಹೇಳಿದ ಬಳಿಕ ಹೊಸ ಪ್ರಶ್ನೆಗಳು ಎದುರಾದವು.
ಮುಂಬೈನ ಭೂಗತ ಜಗತ್ತಿನಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸುವ ದೊಡ್ಡ ಯೋಜನೆಯ ಭಾಗವಾಗಿ ಈ ಹತ್ಯೆ ನಡೆದಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತನ್ನ ಮೂಲ ನೆಲೆಯಿಂದಾಚೆಗೆ ವಿಸ್ತರಿಸುತ್ತಿರುವ ರೀತಿ ಈ ಆತಂಕಕ್ಕೆ ಕಾರಣವಾಗಿದೆ.
ಭೂಗತ ಜಗತ್ತಿನ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಡಿ-ಕಂಪೆನಿಗಿಂತಲೂ ದೊಡ್ಡದಾದ ಅಂತರರಾಷ್ಟ್ರೀಯ ಜಾಲವನ್ನು ನಿರ್ಮಿಸಲು ಬಯಸುತ್ತಿದ್ದಾನೆ. ದಾವೂದ್ ನಂತೆಯೇ ಮುಂಬೈನಲ್ಲಿ ತನ್ನ ನೆಲೆ ಕಂಡುಕೊಳ್ಳುವುದು ಆತನ ಉದ್ದೇಶವಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದಾವೂದ್-ಛೋಟಾ ರಾಜನ್ ಪೈಪೋಟಿಯಿಂದ ಬಿಷ್ಣೋಯ್ ಗ್ಯಾಂಗ್ ವರೆಗೆ :
1993ರ ಮುಂಬೈ ಸರಣಿ ಸ್ಫೋಟಗಳ ಬಳಿಕ ಭೂಗತ ಜಗತ್ತಿನ ಬಣಗಳ ನಡುವಿನ ಸಂಘರ್ಷಕ್ಕೆ ಹೊಸ ಆಯಾಮ ದೊರೆಯಿತು. ಛೋಟಾ ರಾಜನ್ ತನ್ನನ್ನು 'ದೇಶಭಕ್ತ ಡಾನ್' ಎಂದು ಬಿಂಬಿಸಿಕೊಂಡರೆ, ದಾವೂದ್ ನನ್ನು 'ದೇಶವಿರೋಧಿ ಡಾನ್' ಎಂದು ಗುರುತಿಸಲಾಯಿತು. ಈ ಪೈಪೋಟಿ ಹಿಂದೂ-ಮುಸ್ಲಿಂ ಆಯಾಮವನ್ನೂ ಪಡೆದುಕೊಂಡಿತು.
ರಾಷ್ಟ್ರೀಯತೆಯ ಘೋಷಣೆಗಳನ್ನು ಬಳಸುವ ಪ್ರವೃತ್ತಿ ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಲ್ಲಿಯೂ ಕಾಣಿಸುತ್ತಿದೆ. ಗ್ಯಾಂಗ್ನ ಸಾಮಾಜಿಕ ಜಾಲತಾಣದ ಪೋಸ್ಟ್ ಗಳಲ್ಲಿ 'ಜೈ ಶ್ರೀ ರಾಮ್' ಮತ್ತು 'ಜೈ ಭಾರತ್' ಮುಂತಾದ ಘೋಷಣೆಗಳನ್ನು ಬಳಸಲಾಗುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಘೋಷಣೆಗಳ ಬಳಕೆಯ ಹಿಂದೆ ನಿರ್ದಿಷ್ಟ ಉದ್ದೇಶವಿದೆ. ಲಾರೆನ್ಸ್ ಬಿಷ್ಣೋಯ್ ನ ಮಹತ್ವಾಕಾಂಕ್ಷೆ ಮುಂಬೈಗೆ ಮಾತ್ರ ಸೀಮಿತವಾಗಿಲ್ಲ. ಡಿ-ಕಂಪೆನಿಗೆ ಸಮನಾದ ಅಥವಾ ಅದಕ್ಕಿಂತಲೂ ದೊಡ್ಡದಾದ ಅಂತರರಾಷ್ಟ್ರೀಯ ಜಾಲವನ್ನು ನಿರ್ಮಿಸುವ ಪ್ರಯತ್ನದಲ್ಲಿ ಆತ ತೊಡಗಿದ್ದಾನೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಮುಂಬೈನಲ್ಲಿ ಭೂಗತ ಜಗತ್ತಿನ ಹಳೆಯ ಪ್ರಾಬಲ್ಯ ಮತ್ತೆ ಸ್ಥಾಪನೆಯಾಗುತ್ತದೆಯೇ ಎಂಬುದಕ್ಕೆ ಈಗಲೇ ಉತ್ತರ ನೀಡಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ಗುಂಡಿನ ದಾಳಿ ಮತ್ತು ಹತ್ಯೆಗಳ ಬೆಳವಣಿಗೆಗಳು ನಗರದ ಭದ್ರತೆ ಹಾಗೂ ಬಾಲಿವುಡ್ ತಾರೆಯರ ಸುರಕ್ಷತೆಯ ಬಗ್ಗೆ ಹೊಸ ಆತಂಕಗಳನ್ನು ಹುಟ್ಟುಹಾಕಿವೆ.
ಸೌಜನ್ಯ: India Today






