ತಿರುಪತಿ ದೇಗುಲದ ಗೋಶಾಲೆಯಲ್ಲಿ ನೂರಕ್ಕೂ ಅಧಿಕ ದನಗಳು ಸಾವನ್ನಪ್ಪಿರುವುದಾಗಿ ಆಪಾದಿಸಿದ್ದ ವೈಎಸ್ಆರ್ಸಿಪಿ ನಾಯಕನ ವಿರುದ್ಧ ಕೇಸ್

ಸಾಂದರ್ಭಿಕ ಚಿತ್ರ | PC : freepik.com
ತಿರುಪತಿ : ತಿರುಪತಿ ದೇವಸ್ಥಾನದ ಗೋಶಾಲೆಯಲ್ಲಿ ದನಗಳು ಸಾವನ್ನಪ್ಪುತ್ತಿವೆ ಎಂದು ಹೇಳಿಕೆ ನೀಡಿದ್ದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಮಾಜಿ ಅಧ್ಯಕ್ಷ ಹಾಗೂ ವೈಎಸ್ಆರ್ಸಿಪಿ ಪಕ್ಷದ ನಾಯಕ ಬಿ.ಕರುಣಾಕರ ರೆಡ್ಡಿ ವಿರುದ್ಧ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರುಣಾಕರ ರೆಡ್ಡಿ ವಿರುದ್ಧ ಟಿಟಿಡಿ ಮಂಡಳಿಯ ಸದಸ್ಯ ಭಾನುಪ್ರಕಾಶ್ ರೆಡ್ಡಿ ಅವರು ತಿರುಪತಿಯ ಪೊಲೀಸ್ ಅಧೀಕ್ಷಕ ಹರ್ಷವರ್ಧನ್ ಅವರಿಗೆ ದೂರು ನೀಡಿದ್ದರು. ಆಡಳಿತದ ನಿರ್ಲಕ್ಷ್ಯದಿಂದಾಗಿ ಎಸ್.ವಿ.ಗೋಶಾಲೆಯಲ್ಲಿ ಸುಮಾರು 100 ಗೋವುಗಳು ಸಾವನ್ನಪ್ಪಿವೆಯೆಂದು ಕರುಣಾಕರ್ ಮಾಡಿರುವ ಆರೋಪಗಳು ಸುಳ್ಳಾಗಿವೆ. ಇಂತಹ ಹುಸಿ ಹೇಳಿಕೆಗಳು, ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತವೆ ಎಂದು ಭಾನುಪ್ರಕಾಶ್ರೆಡ್ಡಿ ಅವರು ದೂರಿನಲ್ಲಿ ಆಪಾದಿಸಿದ್ದಾರೆ.
ಕರುಣಾಕರ್ ರೆಡ್ಡಿ ವಿರುದ್ಧ ಪೊಲೀಸರು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ (ಬಿಎನ್ಎಸ್)ಗಳಡಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಆಡಳಿತದ ನಿರ್ಲಕ್ಷ್ಯದಿಂದಾಗಿ ಎಸ್ವಿ ಗೋಶಾಲೆಯಲ್ಲಿ ದನಗಳು ಸಾವನ್ನಪ್ಪುತ್ತಿವೆಯೆಂದು ಆರೋಪಿಸಿ ತಿರುಪತಿಯಲ್ಲಿ ಪ್ರತಿಭಟನೆ ನಡೆಸಿದ ವೈಎಸ್ಆರ್ಪಿ ಪಕ್ಷದ ನಾಯಕರಿಗೆ ಗೋಶಾಲೆಗೆ ಪ್ರವೇಶಿಸುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದರು. ಆನಂತರ ಕರುಣಾಕರ ರೆಡ್ಡಿ ಅವರು ತಿರುಪತಿಯ ಸಂಸದ ಎಂ.ಗುರುಮೂರ್ತಿ ಮತ್ತಿತರರೊಂದಿಗೆ ರಸ್ತೆಯಲ್ಲೇ ಧರಣಿ ನಡೆಸಿದರು.ತಿರುಪತಿ ದೇವಾಲಯದ ಟ್ರಸ್ಟ್ ನಡೆಸುತ್ತಿರುವ ಗೋಶಾಲೆಯ ಕಳಪೆ ನಿರ್ವಹಣೆಯ ಕುರಿತ ಪುರಾವೆಗಳನ್ನು ಹತ್ತಿಕ್ಕಲು ತೆಲುಗುದೇಶಂ ನೇತೃತ್ವದ ಸರಕಾರವು ಪೊಲೀಸರನ್ನು ಉಪಯೋಗಿಸಿಕೊಳ್ಳುತ್ತಿದೆಯೆಂದು ವೈಎಸ್ಆರ್ಪಿ ಆಪಾದಿಸಿದೆ.
ಈ ಮಧ್ಯೆ ವೈಎಸ್ಆರ್ಪಿ ಪಕ್ಷದ ಪ್ರತಿಭಟನೆಯನ್ನು ತೆಲುಗುದೇಶಂ ಪಕ್ಷವು ಖಂಡಿಸಿದೆ. ಗೋರಕ್ಷಣೆಯ ವಿಚಾರದಲ್ಲಿ ವೈಎಸ್ಆರ್ಪಿ ಪಕ್ಷವು ರಾಜಕೀಯ ಮಾಡುತ್ತಿದೆ ಹಾಗೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದೆಯೆಂದು ಅವರು ಆಪಾದಿಸಿದ್ದಾರೆ.







