ಮೋದಿ ವಿರುದ್ಧ ಟಿಎಂಸಿ ವಾಗ್ದಾಳಿ: ಅಮಿತ್ ಶಾ ರಾಜೀನಾಮೆಗೆ ಆಗ್ರಹ

Photo: hindustantimes.com
ಕೋಲ್ಕತಾ, ನ. 11: ದಿಲ್ಲಿಯ ಕೆಂಪು ಕೋಟೆ ಸಮೀಪ ಸೋಮವಾರ ಸಂಭವಿಸಿದ ಭೀಕರ ಕಾರು ಸ್ಫೋಟಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಮ್ಸಿ) ಪಕ್ಷ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿದೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ, ಟಿಎಮ್ಸಿ, ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಬಾಂಬ್ ದಾಳಿ ಮತ್ತು ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿರುವ ಪ್ರವಾಸಿಗರ ಮಾರಣಹೋಮವನ್ನು ಉಲ್ಲೇಖಿಸಿದೆ.
‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೆ ಭಯಾನಕ ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದಕ ದಾಳಿಗಳು ನಡೆದಿವೆ ಮತ್ತು ಈಗ ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲೇ ಭೀಕರ ಸ್ಫೋಟ ನಡೆದಿದೆ. ಆದರೆ, ದೇಶದಲ್ಲಿ ರಕ್ತಪಾತ ನಡೆಯುವಾಗ ಪ್ರತಿ ಬಾರಿಯೂ ಗೃಹ ಸಚಿವ ಅಮಿತ್ ಶಾ ಎಳ್ಳಷ್ಟೂ ಉತ್ತರದಾಯಿತ್ವವಿಲ್ಲದೆ ಕೂದಲೂ ಕೊಂಕದೆ ಪಾರಾಗುತ್ತಾರೆ’’ ಎಂದು ಟಿಎಮ್ಸಿ ಹೇಳಿದೆ.
‘‘ಎಳ್ಳಷ್ಟಾದರೂ ಆತ್ಮಸಾಕ್ಷಿ ಇರುವ ಯಾವುದೇ ಗೃಹ ಸಚಿವ ಈ ವೇಳೆಗಾಗಲೇ ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಈ ಸರಕಾರಕ್ಕೆ ಪಶ್ಚಾತ್ತಾಪ ಮತ್ತು ಜವಾಬ್ದಾರಿ ಎನ್ನುವುದು ಅನ್ಯಲೋಕದ ಕಲ್ಪನೆಗಳಂತೆ ಕಾಣುತ್ತದೆ’’ ಎಂದು ಅದು ಹೇಳಿದೆ.
ಮಂಗಳವಾರ ಭೂತಾನ್ ಪ್ರವಾಸಕ್ಕೆ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್, ‘‘ಸ್ವದೇಶದಲ್ಲಿ ಜನರು ಸಾಯುತ್ತಿರುವಾಗ ಅವರು ವಿದೇಶದಲ್ಲಿ ಕ್ಯಾಮರಗಳಿಗೆ ಪೋಸ್ ನೀಡುವಲ್ಲಿ ವ್ಯಸ್ತರಾಗಿದ್ದಾರೆ’’ ಎಂದು ಬಣ್ಣಿಸಿದೆ.
ಪ್ರತಿಯೊಂದು ಸ್ಫೋಟ, ಭದ್ರತಾ ವೈಫಲ್ಯ ಮತ್ತು ಅಮಾಯಕ ಜೀವಗಳ ನಷ್ಟವು ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿ ರಾಷ್ಟ್ರಿಯ ಭದ್ರತೆಯು ‘‘ಪಾತಾಳಕ್ಕೆ ಕುಸಿದಿರುವುದನ್ನು’’ ತೋರಿಸಿದೆ ಎಂದು ಅದು ಹೇಳಿದೆ.
►ರಾಷ್ಟ್ರದ ಹೃದಯದಲ್ಲಿ ಭದ್ರತಾ ವೈಫಲ್ಯ
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಭದ್ರತಾ ಲೋಪದತ್ತ ಬೆಟ್ಟು ಮಾಡಿದ್ದಾರೆ. ‘‘ಇಂಥ ಭೀಕರ ಸ್ಫೋಟವು ರಾಷ್ಟ್ರ ರಾಜಧಾನಿಯ ಹೃದಯದಲ್ಲೇ ನಡೆದಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಕೇಂದ್ರ ಸರಕಾರದ ನೇರ ಅಧೀನದಲ್ಲಿರುವ ದಿಲ್ಲಿ ಪೊಲೀಸರು ಇದರ ಪ್ರಾಥಮಿಕ ಜವಾಬ್ದಾರಿಯನ್ನು ಹೊರಬೇಕು. ಇಲ್ಲದಿದ್ದರೆ, ಇಂಥ ಘೋರ ಭದ್ರತಾ ವೈಫಲ್ಯಗಳು ನಡೆಯಲು ಯಾಕೆ ಅವಕಾಶ ನೀಡಲಾಗುತ್ತದೆ’’ ಎಂದು ಅವರು ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
ಹರ್ಯಾಣದ ಫರೀದಾಬಾದ್ನಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿದ ಅವರು, ಇಂಥ ಘಟನೆಗಳು ಆಂತರಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದರು.







