ಬಿಜೆಪಿ ಕಾರ್ಯಕರ್ತರಿಂದ ನನ್ನ ಮೇಲೆ ಮೊಟ್ಟೆ, ಕಲ್ಲು ತೂರಾಟ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪ

ಮಹುವಾ ಮೊಯಿತ್ರಾ | Photo Credit : X/@ANI, X/@MahuaMoitra
ಹೊಸದಿಲ್ಲಿ, ಜು.1: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಮೊಟ್ಟೆ ಹಾಗೂ ಕಲ್ಲುಗಳನ್ನು ತೂರಿದ್ದು, ಅವಹೇಳನಕಾರಿ ಘೋಷಣೆಗಳನ್ನು ಕೂಗುವ ಮೂಲಕ ಸಂಘಟಿತ ದಾಳಿ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಟಿಎಂಸಿ ಶಾಸಕಿ ಅಲೀಫಾ ಅಹ್ಮದ್ ಅವರ ನಿವಾಸಕ್ಕೆ ಮಹುವಾ ಮೊಯಿತ್ರಾ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಲೀಫಾ ಅಹ್ಮದ್ ಅವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಮನೆಯ ಕಿಟಕಿಯಿಂದ ಹೊರಗಿನ ಪರಿಸ್ಥಿತಿಯನ್ನು ಗಮನಿಸಲು ಇಣುಕಿ ನೋಡಿದಾಗ, ಪ್ರತಿಭಟನಾಕಾರರು ತಮ್ಮತ್ತ ಮೊಟ್ಟೆ ಹಾಗೂ ಕಲ್ಲುಗಳನ್ನು ಎಸೆದರು ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಟಿಎಂಸಿಯ ಸಭೆಯೊಂದರಲ್ಲಿ ಭಾಗವಹಿಸಲು ಅಲೀಫಾ ಅಹ್ಮದ್ ಅವರ ನಿವಾಸಕ್ಕೆ ಆಗಮಿಸಿದ್ದ ಮಹುವಾ ಮೊಯಿತ್ರಾ ವಿರುದ್ಧ ಪ್ರತಿಭಟನಾಕಾರರು 'ಹಿಂದಕ್ಕೆ ಹೋಗಿ' ಹಾಗೂ 'ಕಳ್ಳಿ' ಎಂದು ಘೋಷಣೆಗಳನ್ನು ಕೂಗಿದರು ಎಂದು ತಿಳಿಸಲಾಗಿದೆ.
ಪ್ರತಿಭಟನಾಕಾರರು ಎಸೆದ ಕಲ್ಲುಗಳಲ್ಲಿ ಒಂದು ತಮಗೆ ತಾಗಿದ್ದು, ಇದರಿಂದ ಗಾಯವಾಗಿದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅವರು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಬಿಜೆಪಿ ಕಾರ್ಯಕರ್ತರೇ ಎಂದು ಆರೋಪಿಸಿದ್ದಾರೆ.
'ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ನನ್ನ ಮೇಲೆ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆ. ದಾಳಿ ನಡೆಸಿದವರು ಸಾಮಾನ್ಯ ಜನರಲ್ಲ, ಬಿಜೆಪಿಯ ಕಾರ್ಯಕರ್ತರು' ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಮಹುವಾ ಮೊಯಿತ್ರಾ ವಿರುದ್ಧ ಇಂತಹ ಘಟನೆ ನಡೆದಿಲ್ಲ. ಜೂನ್ 13ರಂದು ಪ್ರಕರಣವೊಂದರ ಸಂಬಂಧ ಕೃಷ್ಣಾನಗರ ಜಿಲ್ಲಾ ನ್ಯಾಯಾಲಯಕ್ಕೆ ಅವರು ಆಗಮಿಸಬೇಕಿದ್ದ ವೇಳೆ, ನ್ಯಾಯಾಲಯದ ಹೊರಗೆ ನೆರೆದಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಅವರ ಮೇಲೆ ಮೊಟ್ಟೆ ಎಸೆಯಲು ಯತ್ನಿಸಿದ್ದರು.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ, 'ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇನೆ. ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ನ ಮೊರೆ ಹೋಗುತ್ತೇನೆ. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ಗೂ ಹೋಗುತ್ತೇನೆ' ಎಂದು ಎಚ್ಚರಿಸಿದ್ದಾರೆ.






