ಟಿಎಂಸಿಗೆ ಮತ್ತೊಂದು ಆಘಾತ | ರಾಜ್ಯಸಭಾ ಸದಸ್ಯತ್ವಕ್ಕೆ ಪ್ರಕಾಶ್ ಚಿಕ್ ಬರೈಕ್ ರಾಜೀನಾಮೆ

Photo | X / indiatoday
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರೈಕ್ ಅವರು ಗುರುವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿ ಸದಸ್ಯರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಇದಕ್ಕೂ ಮುನ್ನ ಟಿಎಂಸಿಯ ರಾಜ್ಯಸಭಾ ಸದಸ್ಯರಾದ ಸುಖೇಂದು ಶೇಖರ್ ರಾಯ್ ಹಾಗೂ ಸುಶ್ಮಿತಾ ದೇವ್ ಅವರು ರಾಜೀನಾಮೆ ಸಲ್ಲಿಸಿದ್ದರು. ಇದೀಗ ಬರೈಕ್ ಅವರು ಕೂಡ ಸ್ಥಾನ ತ್ಯಜಿಸಿರುವುದು ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿ ಪರಿಣಮಿಸಿದೆ.
ಬರೈಕ್ ಅವರ ರಾಜೀನಾಮೆಯ ಬಳಿಕ ರಾಜ್ಯಸಭೆಯಲ್ಲಿ ಟಿಎಂಸಿ ಸದಸ್ಯರ ಸಂಖ್ಯೆ 10ಕ್ಕೆ ಇಳಿಯಲಿದೆ. ಇದೇ ವೇಳೆ, ಮುಂದಿನ ವಾರದೊಳಗೆ ಪಕ್ಷದ ಇನ್ನೂ ಮೂವರು ರಾಜ್ಯಸಭಾ ಸದಸ್ಯರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಂದೇ ವಾರದಲ್ಲಿ ಮೂವರು ರಾಜ್ಯಸಭಾ ಸದಸ್ಯರು ಪಕ್ಷ ತೊರೆದಿರುವುದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ರಾಜಕೀಯವಾಗಿ ಹಿನ್ನಡೆಯಾಗಿದೆ.




