ʼಇದು ದೇಶಕ್ಕೆ ಮಾರಕ ʼ: ಜನ್ಮಸಿದ್ಧ ಪೌರತ್ವದ ಕುರಿತ US ಸುಪ್ರೀಂ ಕೋರ್ಟ್ ತೀರ್ಪಿಗೆ ಟ್ರಂಪ್ ಟೀಕೆ

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಅಮೆರಿಕದಲ್ಲಿ ತಾತ್ಕಾಲಿಕವಾಗಿ ಮತ್ತು ಅಕ್ರಮವಾಗಿ ವಾಸಿಸುವ ಜನರ ಮಕ್ಕಳಿಗೆ ಪೌರತ್ವ ನೀಡುವ ʼಜನ್ಮಸಿದ್ಧ ಪೌರತ್ವದ ಹಕ್ಕʼನ್ನು ರದ್ದುಪಡಿಸಲು ಡೊನಾಲ್ಡ್ ಟ್ರಂಪ್ ಮಾಡಿದ್ದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಅಮೆರಿಕದಲ್ಲಿ ಹಲವು ವರ್ಷಗಳಿಂದ ಜಾರಿಯಲ್ಲಿರುವ ಈ ಹಕ್ಕನ್ನು ಸೀಮಿತಗೊಳಿಸುವ ಟ್ರಂಪ್ ಅವರ ಆದೇಶವನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದರು. ವಲಸೆಯನ್ನು ನಿಯಂತ್ರಿಸಲು ಅವರು ಕೈಗೊಂಡ ಹಲವು ಕ್ರಮಗಳಲ್ಲಿ ಇದೂ ಒಂದಾಗಿತ್ತು. ಟ್ರಂಪ್ ಅವರ ವಲಸೆ ನೀತಿಗಳು ಜನಾಂಗೀಯ ಹಾಗೂ ಧಾರ್ಮಿಕ ತಾರತಮ್ಯದಿಂದ ಕೂಡಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇದೀಗ ಸುಪ್ರೀಂ ಕೋರ್ಟ್ ಆದೇಶದಿಂದ ವಲಸೆ ನಿಯಂತ್ರಣಕ್ಕೆ ಸಂಬಂಧಿಸಿದ ಟ್ರಂಪ್ ಅವರ ಪ್ರಮುಖ ಯೋಜನೆಗೆ ದೊಡ್ಡ ಹೊಡೆತ ಬಿದ್ದಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದ ಡೊನಾಲ್ಡ್ ಟ್ರಂಪ್, "ಈ ತೀರ್ಪು ನಮ್ಮ ದೇಶಕ್ಕೆ ಅತ್ಯಂತ ಮಾರಕವಾಗಿದೆ. ಅಧ್ಯಕ್ಷರ ಬೆಂಬಲದೊಂದಿಗೆ ಕಾಂಗ್ರೆಸ್( ಸಂಸತ್) ನಲ್ಲಿ ಕಾನೂನು ತಂದು ಇದನ್ನು ಸರಿಪಡಿಸಬಹುದು" ಎಂದು ಹೇಳಿದ್ದಾರೆ.
ಇದಕ್ಕೆ "ದೀರ್ಘ ಮತ್ತು ಸಂಕೀರ್ಣವಾದ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವೇ ಇಲ್ಲ. ನಮ್ಮ ದೇಶದಲ್ಲಿ ಜನ್ಮಸಿದ್ಧ ಪೌರತ್ವದಿಂದ ಉಂಟಾಗುತ್ತಿರುವ ದುಬಾರಿ ಹಾಗೂ ಅನ್ಯಾಯಕರ ವ್ಯವಸ್ಥೆಗೆ ತೆರೆ ಎಳೆಯಲು ಕಾಂಗ್ರೆಸ್ ಇಂದೇ ಕ್ರಮ ಕೈಗೊಳ್ಳಬೇಕು. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ," ಎಂದು ಟ್ರಂಪ್ ಹೇಳಿದ್ದಾರೆ.
1898ರ ́ಯುನೈಟೆಡ್ ಸ್ಟೇಟ್ಸ್ / ವಾಂಗ್ ಕಿಮ್ ಆರ್ಕ್ʼ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಜನ್ಮಸಿದ್ಧ ಪೌರತ್ವದ ಪ್ರಶ್ನೆಯನ್ನು ಇತ್ಯರ್ಥಗೊಳಿಸಿದೆ ಎಂದು ಸವಾಲುದಾರರು ಹೇಳಿದ್ದಾರೆ. 14ನೇ ತಿದ್ದುಪಡಿಯು ವಿದೇಶಿ ಪ್ರಜೆಗಳ ಮಕ್ಕಳನ್ನು ಒಳಗೊಂಡಂತೆ ಅಮೆರಿಕದ ನೆಲದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವವನ್ನು ನೀಡುತ್ತದೆ.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಟ್ರಂಪ್ ಅವರ ಆದೇಶವು ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯಲ್ಲಿರುವ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. ಈ ತಿದ್ದುಪಡಿಯು ಅಮೆರಿಕದಲ್ಲಿ ಜನಿಸಿದ ಬಹುತೇಕ ಎಲ್ಲರಿಗೂ ಪೌರತ್ವವನ್ನು ಖಾತರಿಪಡಿಸುತ್ತದೆ.






