“ಆಧಾರ್ ತೋರಿಸಿ, ಇಲ್ಲದಿದ್ದರೆ 4 ದಿನಗಳ ಬಳಿಕ ನಿಮ್ಮ ಮಗುವನ್ನು ಪಡೆಯಿರಿ”: ತಾಜ್ ಮಹಲ್ನಲ್ಲಿ CISF ಸಿಬ್ಬಂದಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ ಪ್ರವಾಸಿಗ

Screengrab: X/@Chhotukingoffi1
ಆಗ್ರಾ: ತಾಜ್ ಮಹಲ್ನ ಪೂರ್ವ ದ್ವಾರದಲ್ಲಿ ತಮ್ಮ 3 ವರ್ಷದ ಮಗನ ಗುರುತಿನ ದಾಖಲೆಗಳ ವಿಚಾರವಾಗಿ ನಡೆದ ವಾಗ್ವಾದದ ಬಳಿಕ CISF ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಿಲ್ಲಿಯ ಪ್ರವಾಸಿಗರೊಬ್ಬರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೋರ್ವರು, ವಿಐಪಿ ದ್ವಾರದ ಬಳಕೆಯ ವಿಚಾರವಾಗಿ ಸಿಬ್ಬಂದಿ ಮತ್ತು ಪ್ರವಾಸಿಗರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿಸಿದ್ದಾರೆ.
“ಸ್ಮಾರಕದ ಆವರಣದೊಳಗೆ ನನ್ನ ಮಗ ಸುಮಾರು ಐದು ನಿಮಿಷಗಳ ಕಾಲ ನಾಪತ್ತೆಯಾಗಿದ್ದನು. ಬಳಿಕ CISF ಸಿಬ್ಬಂದಿಯೊಬ್ಬರ ಬಳಿ ಮಗು ಪತ್ತೆಯಾಗಿತ್ತು. ಈ ವೇಳೆ ಸಿಬ್ಬಂದಿ ಮಗುವಿನ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ” ಎಂದು ಸಾಜಿದ್ ಎಂಬ ಪ್ರವಾಸಿಗ ಆರೋಪಿಸಿದ್ದಾರೆ.
"ಆ ಬಾಲಕ ನನ್ನ ಮಗನೆಂದು ಸಾಬೀತುಪಡಿಸಲು, ನಾನು ಮಗುವಿನ ಜೊತೆಯಲ್ಲಿರುವ ಫೋಟೊ ತೋರಿಸಿದ್ದಲ್ಲದೆ, ಮಗುವಿನ ಜನನ ಪ್ರಮಾಣಪತ್ರವನ್ನೂ ತೋರಿಸಿದ್ದೇನೆ. ಆದರೂ, CISF ಸಿಬ್ಬಂದಿ ಆಧಾರ್ ಕಾರ್ಡ್ ತೋರಿಸುವಂತೆ ಪಟ್ಟುಹಿಡಿದಿದ್ದಾರೆ. ಒಂದು ವೇಳೆ ಆಧಾರ್ ಕಾರ್ಡ್ ತೋರಿಸಲು ವಿಫಲವಾದರೆ, 4 ದಿನಗಳ ಬಳಿಕವಷ್ಟೇ ಮಗುವನ್ನು ವಾಪಸ್ ನೀಡುವುದಾಗಿ ಸಿಬ್ಬಂದಿ ಹೇಳಿದ್ದಾರೆ" ಎಂದು ಸಾಜಿದ್ ಆರೋಪಿಸಿದ್ದಾರೆ.
ಇದಲ್ಲದೆ, CISF ಸಿಬ್ಬಂದಿ ನನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ನನ್ನ ಭಾವ ಆಝಾದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರು ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಜಿದ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪುರಾತತ್ವಶಾಸ್ತ್ರಜ್ಞೆ ಡಾ. ಸ್ಮಿತಾ ಎಸ್. ಕುಮಾರ್, ಪ್ರವಾಸಿಗರು ಮತ್ತು CISF ಸಿಬ್ಬಂದಿ ನಡುವೆ ನಡೆದ ವಾಗ್ವಾದದ ಬಗ್ಗೆ ತಮಗೆ ಮಾಹಿತಿ ಲಭಿಸಿದೆ. ಈ ಸಂಬಂಧ ನಮ್ಮ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಈ ಬಗ್ಗೆ CISF ಕಮಾಂಡೆಂಟ್ ಅವರಿಂದಲೂ ವಿವರಣೆ ಪಡೆಯಲಾಗುವುದು. ಈ ಕುರಿತು ದಿಲ್ಲಿಯಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೂ ಲಿಖಿತವಾಗಿ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.






