ವಿಷಕಾರಿ ಅಲೋಪತಿ ಔಷಧಿಗಳು ಲಕ್ಷಾಂತರ ಭಾರತೀಯರನ್ನು ಕೊಂದಿವೆ: ರಾಮದೇವ್

ಹರಿದ್ವಾರ: ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಯೋಗಗುರು ಬಾಬಾ ರಾಮದೇವ್ ಅಲೋಪತಿ ವೈದ್ಯಪದ್ಧತಿ ಬಗ್ಗೆ ತಮ್ಮ ನಿಲುವನ್ನು ಪುನರುಚ್ಚರಿಸಿದ್ದು, "ಭಾರತದಲ್ಲಿ ಲಕ್ಷಾಂತರ ಮಂದಿ ಅಲೋಪತಿ ಔಷಧಿಗಳ ಬಳಕೆಯಿಂದ ಸಾವಿಗೀಡಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
ಇಲ್ಲಿನ ಪತಂಜಲಿ ಯೋಗ ಪೀಠದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ವೈದ್ಯಕೀಯ ಸ್ವಾಯತ್ತತೆಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಪತಂಜಲಿ ಮೂಲಕ ನಡೆಯುತ್ತಿರುವ ಸ್ವದೇಶಿ ಕ್ರಾಂತಿ ಭಾರತದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ವೈದ್ಯಕೀಯ ಸ್ವಾತಂತ್ರ್ಯವನ್ನು ಸಾಧಿಸುವ ಗುರಿ ಹೊಂದಿದೆ ಎಂದರು.
ವಿದೇಶಿ ಫಾರ್ಮಸ್ಯೂಟಿಕಲ್ ಕಂಪನಿಗಳು ವಿಷಕಾರಿ ಎನಿಸಿದ ಕೃತಕ ಔಷಧಿಗಳನ್ನ ಅವಲಂಬಿಸುವ ಚಕ್ರವನ್ನು ನಿರ್ಮಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಅವರು, ಈ ವಿಷಯುಕ್ತ ಔಷಧಿಗಳಿಂದಾಗಿ ಪ್ರತಿ ವರ್ಷ ಲಕ್ಷಾಂತರ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
"ಅಲೋಪತಿ ಔಷಧಿಗಳಿಂದ ಲಕ್ಷಾಂತರ ಮಂದಿ ನರಳುತ್ತಿದ್ದು ಮತ್ತು ಜೀವ ಕಳೆದುಕೊಳ್ಳುತ್ತಿದ್ದು, ವೈದ್ಯಕೀಯ ಸ್ವಾತಂತ್ರ್ಯದ ಕನಸು ಇನ್ನೂ ನನಸಾಗಿಲ್ಲ. ಬ್ರಿಟಿಷ್ ಆಡಳಿತದಲ್ಲಿ ಮತ್ತು ವಿಶ್ವಾದ್ಯಂತ ಸಂಘರ್ಷಗಳಲ್ಲಿ ಲಕ್ಷಾಂತರ ಮಂದಿ ಮೃತಪಟ್ಟಂತೆ, ಇದೀಗ ಕೃತಕ ಔಷಧಿಗಳಿಂದ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ" ಎಂದು ರಾಮ್ ದೇವ್ ವಿವರಿಸಿದರು.
ಪತಂಜಲಿ ವೆಲ್ ನೆಸ್ ಬ್ಯಾನರ್ ನಡಿಯಲ್ಲಿ ಸ್ವದೇಶಿ ಚಳವಳಿಯ ವೇಗ ವರ್ಧನೆಗೆ ಪತಂಜಲಿ ಮುಂದಾಗಿದೆ. ಈ ಮೂಲಕ ದೇಶೀಯ ಹಾಗೂ ಪ್ರಾಕೃತಿಕ ಆರೋಗ್ಯ ಕ್ರಮಗಳಿಗೆ ಜನ ದೊಡ್ಡ ಸಂಖ್ಯೆಯಲ್ಲಿ ಬದಲಾಗುವಂತೆ ಪ್ರಯತ್ನ ನಡೆಸಲಿದೆ ಎಂದರು. ಈ ಮೊದಲು ಕೂಡಾ ಇಂಥ ಹೇಳಿಕೆ ನೀಡಿದ್ದ ರಾಮ್ ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ದೂರು ಕೂಡಾ ದಾಖಲಿಸಿತ್ತು.







