ಇಂಟರ್ನೆಟ್ ಬೇಡದವರಿಗೆ ಕರೆ, SMS ರೀಚಾರ್ಜ್ ಆಯ್ಕೆ ಹೆಚ್ಚಿಸಿ: TRAI ಆದೇಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಡೇಟಾ ಅಥವಾ ಇಂಟರ್ನೆಟ್ ಸೇವೆ ಅಗತ್ಯವಿಲ್ಲದೆ ಕೇವಲ ಕರೆ ಮತ್ತು SMS ಬಳಸುವ ಮೊಬೈಲ್ ಗ್ರಾಹಕರಿಗೆ ಹೆಚ್ಚಿನ ರೀಚಾರ್ಜ್ ಆಯ್ಕೆಗಳನ್ನು ನೀಡುವಂತೆ ಟೆಲಿಕಾಂ ಕಂಪೆನಿಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಆದೇಶಿಸಿದೆ.
ಈ ಸಂಬಂಧ ‘ಟೆಲಿಕಾಂ ಗ್ರಾಹಕ ರಕ್ಷಣೆ (ಹದಿಮೂರನೇ ತಿದ್ದುಪಡಿ) ನಿಯಮಾವಳಿ, 2026’ ಅನ್ನು TRAI ಮಂಗಳವಾರ ಬಿಡುಗಡೆ ಮಾಡಿದೆ.
ಸದ್ಯ ಕೇವಲ ಕರೆ ಮತ್ತು SMS ಇರುವ ವಿಶೇಷ ಸುಂಕದ ವೋಚರ್ ಗಳು (STV) ಕಡಿಮೆ ಸಂಖ್ಯೆಯಲ್ಲಿವೆ. ಅದರಲ್ಲೂ ಕಡಿಮೆ ಅವಧಿಯ ರೀಚಾರ್ಜ್ಗಳು ಕಡಿಮೆ ಇವೆ. ಬಹುತೇಕ STVಗಳು ದೀರ್ಘಾವಧಿಯ ಮಾನ್ಯತೆ ಹೊಂದಿವೆ. ಇದರಿಂದ ಕಡಿಮೆ ಆದಾಯದ ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಕಡಿಮೆ ಅವಧಿಗೆ ಮತ್ತು ಕಡಿಮೆ ದರದಲ್ಲಿ ರೀಚಾರ್ಜ್ ಮಾಡಿಕೊಳ್ಳಲು ಆಯ್ಕೆಗಳಿಲ್ಲ ಎಂದು TRAI ತಿಳಿಸಿದೆ.
ಹೊಸ ನಿಯಮದ ಪ್ರಕಾರ, ಟೆಲಿಕಾಂ ಕಂಪೆನಿಗಳು ಕೇವಲ ಕರೆ ಮತ್ತು SMS ಇರುವ ರೀಚಾರ್ಜ್ಗಳಲ್ಲಿ ಮೂರು ರೀತಿಯ ಆಯ್ಕೆಗಳನ್ನು ನೀಡಬೇಕು.
ಮೊದಲನೆಯದಾಗಿ, 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ಕರೆ ಮತ್ತು SMS ರೀಚಾರ್ಜ್ ಇರಬೇಕು. ಕಂಪೆನಿ ಡೇಟಾ ಒಳಗೊಂಡ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ STV ನೀಡುತ್ತಿದ್ದರೆ, ಅದಕ್ಕೆ ಅನುಗುಣವಾಗಿ ಕೇವಲ ಕರೆ ಮತ್ತು SMS ಇರುವ STVಯನ್ನೂ ಸೂಕ್ತ ಕಡಿಮೆ ದರದಲ್ಲಿ ನೀಡಬೇಕು.
ಎರಡನೆಯದಾಗಿ, ಪ್ರತಿ ತಿಂಗಳು ಒಂದೇ ದಿನಾಂಕದಂದು ನವೀಕರಿಸಿಕೊಳ್ಳಬಹುದಾದ ಕರೆ ಮತ್ತು SMS ರೀಚಾರ್ಜ್ ಇರಬೇಕು. ಯಾವುದೇ ತಿಂಗಳಲ್ಲಿ ಆ ದಿನಾಂಕ ಇಲ್ಲದಿದ್ದರೆ, ಆ ತಿಂಗಳ ಕೊನೆಯ ದಿನವನ್ನು ನವೀಕರಣ ದಿನವೆಂದು ಪರಿಗಣಿಸಬೇಕು.
ಮೂರನೆಯದಾಗಿ, ಈಗಿರುವ STVಗಳಿಗಿಂತ ಹೆಚ್ಚಿನ ಮಾನ್ಯತೆ ಹೊಂದಿರುವ ಕನಿಷ್ಠ ಒಂದು ಕರೆ ಮತ್ತು SMS ರೀಚಾರ್ಜ್ ಇರಬೇಕು.
ಈ ಬದಲಾವಣೆಗಳಿಂದ ಕಡಿಮೆ ಆದಾಯದ ಗ್ರಾಹಕರು ತಮ್ಮ ಅಗತ್ಯ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ರೀಚಾರ್ಜ್ ಮಾಡಿಕೊಳ್ಳಬಹುದು. ಡೇಟಾ ಇರುವ STVಗಳನ್ನು ಬಳಸಲು ಇಚ್ಛಿಸದ ಗ್ರಾಹಕರಿಗೂ ಹೆಚ್ಚಿನ ಆಯ್ಕೆಗಳು ಸಿಗಲಿವೆ ಎಂದು TRAI ತಿಳಿಸಿದೆ.
TRAI ಏಪ್ರಿಲ್ 7, 2026ರಂದು ತಿದ್ದುಪಡಿ ನಿಯಮದ ಕರಡನ್ನು ಸಮಾಲೋಚನೆಗಾಗಿ ಬಿಡುಗಡೆ ಮಾಡಿತ್ತು. ಇದಕ್ಕೆ ಸಂಬಂಧಪಟ್ಟವರಿಂದ 1,132 ಪ್ರತಿಕ್ರಿಯೆಗಳು ಬಂದಿದ್ದವು. ನಿಯಮಾವಳಿಗಳನ್ನು ಅಂತಿಮಗೊಳಿಸುವ ಮೊದಲು ಜೂನ್ 15ರಂದು ಮುಕ್ತ ಚರ್ಚೆ (Open House Discussion) ನಡೆಸಲಾಗಿತ್ತು.
ಒಮ್ಮೆಲೇ ಏರಿದ ವೊಡಾಫೋನ್ ಷೇರು
ಮಂಗಳವಾರ ಮಧ್ಯಾಹ್ನ 1.45ರ ವೇಳೆಗೆ BSEಯಲ್ಲಿ ವೊಡಾಫೋನ್ ಐಡಿಯಾ (Vi) ಷೇರು ಶೇ 2.10ರಷ್ಟು ಏರಿಕೆಯಾಗಿ 14.13 ರೂ.ನಲ್ಲಿ ವಹಿವಾಟು ನಡೆಸಿತು. ಭಾರತಿ ಏರ್ಟೆಲ್ ಷೇರು ಶೇ 0.73ರಷ್ಟು ಕುಸಿದು 1,816.65 ರೂ.ನಲ್ಲಿ ವಹಿವಾಟು ನಡೆಸಿತು.
ಟೆಲಿಕಾಂ ಕಂಪೆನಿಗಳು ಹಣಗಳಿಕೆ ಮತ್ತು ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಹೆಚ್ಚಿಸುವತ್ತ ಗಮನಹರಿಸುತ್ತಿರುವ ಸಂದರ್ಭದಲ್ಲಿ ಈ ಬದಲಾವಣೆ ಬಂದಿದೆ.
ಭಾರತಿ ಏರ್ಟೆಲ್ ಆಗಸ್ಟ್ನಲ್ಲಿ ಕೆಲವು ಅನಿಯಮಿತ ದೈನಂದಿನ ಡೇಟಾ ಪ್ರಿಪೇಯ್ಡ್ ಯೋಜನೆಗಳ ಆರಂಭಿಕ ದರವನ್ನು 299 ರೂ.ನಿಂದ 349 ರೂ.ಗೆ ಹೆಚ್ಚಿಸಿತ್ತು. ಕಂಪೆನಿಯ ಮೊಬೈಲ್ ARPU ಜೂನ್ ತ್ರೈಮಾಸಿಕದಲ್ಲಿ 264 ರೂ. ಇತ್ತು. ಒಂದು ವರ್ಷದ ಹಿಂದೆ ಅದು 250 ರೂ. ಇತ್ತು.






