ವಿದೇಶಗಳಿಂದ ಕ್ರಿಪ್ಟೋ ಮೂಲಕ 2,500 ಕೋಟಿ ರೂ.ಗಳ ವರ್ಗಾವಣೆ: ಬೆಂಗಳೂರಿನ ಸಂಸ್ಥೆಗಳ ಮೇಲೆ ED ದಾಳಿ

ಸಾಂದರ್ಭಿಕ ಚಿತ್ರ| Photo Credit : PTI
ಹೊಸದಿಲ್ಲಿ, ಜೂ. 19: ವಿದೇಶಗಳಿಂದ ಕ್ರಿಪ್ಟೋಕರೆನ್ಸಿಗಳ ಮೂಲಕ 2,500 ಕೋಟಿ ರೂ.ಗೂ ಹೆಚ್ಚಿನ ಅನಧಿಕೃತ ವರ್ಗಾವಣೆಗಳ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED)ವು ಶುಕ್ರವಾರ ಬೆಂಗಳೂರಿನ ಆರು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಸುಮಾರು ಆರು ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)ಯ ನಿಬಂಧನೆಗಳಡಿ ಟ್ರಾನ್ಸಾಕ್ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ., ಕ್ಯಾರೆಟೆಕ್ಸ್ ಟೆಕ್ನಾಲಜೀಸ್ ಪ್ರೈ. ಲಿ., ಮೋಕ್ಷಜ್ಞ ಟೆಕ್ನಾಲಜೀಸ್ ಪ್ರೈ. ಲಿ., ಬಯ್ಹಾಟ್ಕೆ ಇಂಟರ್ನೆಟ್ ಪ್ರೈ. ಲಿ. ಮತ್ತು ಅಭಿಭಾ ಟೆಕ್ನಾಲಜೀಸ್ ಪ್ರೈ. ಲಿ. ಕಂಪೆನಿಗಳಿಗೆ ಸೇರಿದ ಆವರಣಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆದಿವೆ.
ED ಪ್ರಕಾರ, ಈ ಕಂಪೆನಿಗಳು RBI ಅನುಮತಿ ಇಲ್ಲದೆ ಭಾರತೀಯ ರೂಪಾಯಿಗಳನ್ನು ವರ್ಚುವಲ್ ಡಿಜಿಟಲ್ ಆಸ್ತಿಗಳನ್ನಾಗಿ ಹಾಗೂ ಡಿಜಿಟಲ್ ಆಸ್ತಿಗಳನ್ನು ಭಾರತೀಯ ರೂಪಾಯಿಗಳನ್ನಾಗಿ ಪರಿವರ್ತಿಸಲು ಬಳಕೆದಾರರಿಗೆ ಆನ್-ರ್ಯಾಂಪ್ ಮತ್ತು ಆಫ್-ರ್ಯಾಂಪ್ ಸೇವೆಗಳನ್ನು ಒದಗಿಸುತ್ತಿದ್ದವು.




