RBI ನಿಂದ ರೂ. 2.7 ಲಕ್ಷ ಕೋಟಿ ಲಾಭಾಂಶ ಕೇಂದ್ರಕ್ಕೆ ವರ್ಗಾವಣೆ

PC: screengrab/X.com/RBI
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬಜೆಟ್ ಅಂದಾಜನ್ನು ಮೀರಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ದಾಖಲೆ 2.7 ಲಕ್ಷ ಕೋಟಿ ರೂಪಾಯಿ ಲಾಭಾಂಶವನ್ನು ವರ್ಗಾಯಿಸಲಿದೆ. RBIನಿಂದ 2.1 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಕೇಂದ್ರ ಬಜೆಟ್ ಅಂದಾಜಿಸಿತ್ತು.
2026ನೇ ಹಣಕಾಸು ವರ್ಷದಲ್ಲಿ RBI, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿ ಒಟ್ಟು ಹಣಕಾಸು ಸಂಸ್ಥೆಗಳಿಂದ ಕೇಂದ್ರ ಸರ್ಕಾರ ನಿರೀಕ್ಷಿಸಿದ್ದ 2.6 ಲಕ್ಷ ಕೋಟಿಗಿಂತಲೂ ಇದು ಅಧಿಕ. ಈ ತುರ್ತು ಲಾಭಾಂಶ ಸಂಗ್ರಹವು ಜಾಗತಿಕ ಅನಿಶ್ಚಿತತೆ ಮತ್ತು ದೇಶೀಯ ವಿತ್ತ ಸ್ಥಿರತೆಯ ಬಗೆಗಿನ ಆತಂಕದ ನಡುವೆ ಕೇಂದ್ರ ಬ್ಯಾಂಕಿನ ಎಚ್ಚರಿಕೆಯ ನಡೆಯನು ಬಿಂಬಿಸುತ್ತದೆ.
ನಿರೀಕ್ಷೆಗಿಂತ ಹೆಚ್ಚಿನ ಲಾಭಾಂಶವು ದರ ಕಡಿತಕ್ಕೆ ನೆರವಾಗಲಿದ್ದು, ಸರ್ಕಾರಿ ಬಾಂಡ್ ಗಳ ಮೇಲಿನ ಪ್ರತಿಫಲವು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯನ್ನು ವಿಶ್ಲೇಷಕರು ಹೊಂದಿದ್ದಾರೆ. RBI ಒಂದು ವರ್ಷದ ಹಿಂದೆ ರಿಸ್ಕ್ ಬಫರ್ ಪ್ರಮಾಣವನ್ನು ಶೇಕಡ 6.4ರಿಂದ 7.5ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬೇಕಾದ ಲಾಭಾಂಶ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ ವಾಸ್ತವ ಲಾಭವು ಮತ್ತಷ್ಟು ಅಧಿಕವಾಗಲಿದೆ.
ವಿದೇಶಿ ವಿನಿಮಯ ಮಾರಾಟದಿಂದ ಬಂದಿರುವ ಅಧಿಕ ಆದಾಯ, ಸಾಗರೋತ್ತರ ಆಸ್ತಿಗಳ ಮೇಲಿನ ಪ್ರತಿಫಲ ಸುಧಾರಣೆ, ದ್ರವ್ಯತೆಯ ಕಾರ್ಯಾಚರಣೆಯಿಂದ ಅಧಿಕ ಲಾಭದ ಕಾರಣದಿಂದ RBI ಆದಾಯ ಅಧಿಕವಾಗಿದೆ. RBI ದೊಡ್ಡಪಾಲನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಬಳಿಕವೂ ಹೆಚ್ಚಿನ ಮೊತ್ತವನ್ನು ಕೇಂದ್ರಕ್ಕೆ ವರ್ಗಾಯಿಸಲು ಈ ಅಂಶಗಳು ಪೂರಕವಾಗಿವೆ.
IRCA ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರ ಪ್ರಕಾರ, ಬಜೆಟ್ ನಿರೀಕ್ಷೆಗಿಂತ ಸುಮಾರು 40-50 ಸಾವಿರ ಕೋಟಿ ಅಧಿಕ ಮೊತ್ತವನ್ನು RBI ವರ್ಗಾಯಿಸಲಿದ್ದು, ಇದು ಒಟ್ಟು ಜಿಡಿಪಿಯ ಶೇಕಡ 11-14ರಷ್ಟಾಗಿದೆ.







