ಮಧ್ಯಪ್ರದೇಶ | ಬುಡಕಟ್ಟು ಮಹಿಳೆಯ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ನೀಡಿ ಹತ್ಯೆ

ಸಾಂದರ್ಭಿಕ ಚಿತ್ರ
ಇಂದೋರ್ : 45ರ ಹರೆಯದ ಬುಡಕಟ್ಟು ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಚಿತ್ರಹಿಂಸೆ ನೀಡಿದ ಘಟನೆ ಶನಿವಾರ ಅಪರಾಹ್ನ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಖಲ್ವಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆ ತೀವ್ರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಗ್ರಾಮದಲ್ಲಿ ಮನೆಯೊಂದರ ಅಂಗಳದಲ್ಲಿ ಪತ್ತೆಯಾಗಿದ್ದಳು.
ಮಹಿಳೆಯ ಮೇಲೆ ತೀವ್ರ ಲೈಂಗಿಕ ದೌರ್ಜನ್ಯ ನಡೆದಿದ್ದು,ಅಂಗಳದಲ್ಲಿ ಬಿದ್ದಿದ್ದ ಆಕೆಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಆಕೆಯ ಗರ್ಭಾಶಯವು ಗೋಚರವಾಗುವಂತೆ ಉಬ್ಬಿಕೊಂಡಿದ್ದು,ಆಕೆಯನ್ನು ಹಿಂಸಿಸಲು ರಾಡ್ ಅಥವಾ ಮರದ ವಸ್ತುವನ್ನು ಬಳಸಿದ್ದಿರಬಹುದು ಎಂದು ಸ್ಥಳೀಯರು ಹೇಳಿದರು.
ಗ್ರಾಮಸ್ಥರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೂ ಆಕೆ ಬದುಕುಳಿಯಲಿಲ್ಲ.
ಹರಿ ಮತ್ತು ಸುನಿಲ್ ಎನ್ನುವವರನ್ನು ಬಂಧಿಸಲಾಗಿದೆ. ಆರೋಪಿಗಳು ಮಹಿಳೆಗೆ ಚಿತ್ರಹಿಂಸೆ ನೀಡಿದ್ದರು ಮತ್ತು ಆಕೆಯ ಖಾಸಗಿ ಅಂಗಗಳನ್ನು ಘಾಸಿಗೊಳಿಸಿದ್ದರು ಎಂದು ಡಿಐಜಿ ಸಿದ್ಧಾರ್ಥ ಬಹುಗುಣ ಅವರು ಸುದ್ದಿಗಾರರಿಗೆ ತಿಳಿಸಿದರು.
ಪೋಲಿಸರ ಪ್ರಕಾರ ಮಹಿಳೆ ಗ್ರಾಮದಲ್ಲಿ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಶನಿವಾರ ಬೆಳಿಗ್ಗೆ ಮನೆಯಿಂದ ಹೊರಬಿದ್ದಿದ್ದಳು. ಆಕೆ ಕೊನೆಯ ಬಾರಿಗೆ ಹರಿ ಮತ್ತು ಸುನಿಲ್ ಜೊತೆ ಕಾಣಿಸಿಕೊಂಡಿದ್ದು, ಅವರೂ ಮದುವೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಿಳೆ ಅವರಿಬ್ಬರೊಂದಿಗೆ ಹರಿಯ ಮನೆಗೆ ತೆರಳಿದ್ದು,ಅಲ್ಲಿ ಅವರು ಮದ್ಯ ಸೇವಿಸಿದ್ದರು ಮತ್ತು ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ.
ಬಳಿಕ ಮಹಿಳೆ ನೆರೆಮನೆಯ ಅಂಗಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಮಹಿಳೆ ತನಗೆ ತಲೆ ಸುತ್ತುತ್ತಿದೆ ಎಂದು ಹೇಳಿಕೊಂಡಿದ್ದಳು. ಇಲ್ಲಿಯೇ ಮಲಗುವಂತೆ ಆಕೆಗೆ ಸೂಚಿಸಿದ್ದೆ,ಬಳಿಕ ಆಕೆ ಪ್ರಜ್ಞೆಯನ್ನು ಕಳೆದುಕೊಂಡಿದ್ದಳು ಎಂದು ನೆರೆಮನೆಯಾತ ಪೋಲಿಸರಿಗೆ ತಿಳಿಸಿದ್ದಾನೆ.
ಮಹಿಳೆಯ ಖಾಸಗಿ ಭಾಗಗಳಿಗೆ ತೀವ್ರ ಗಾಯಗಳಾಗಿದ್ದನ್ನು ಪ್ರಾಥಮಿಕ ವೈದ್ಯಕೀಯ ತಪಾಸಣೆಗಳು ಬಹಿರಂಗಗೊಳಿಸಿವೆ.
ರವಿವಾರ ವಿಧಿವಿಜ್ಞಾನ ತಜ್ಞರು ಮತ್ತು ಮೆಡಿಕಲ್ ಕಾಲೇಜಿನ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.







