ಎಸ್ಎಸ್ಸಿ ಪರೀಕ್ಷಾ ಹಗರಣ: ಈಡಿ ದಾಳಿ ವೇಳೆ ಗೋಡೆ ಏರಿದ ತೃಣಮೂಲ ಕಾಂಗ್ರೆಸ್ ಶಾಸಕ ಜಿಬಾನ್; ಬಂಧನ

Photo | indianexpress
ಕೋಲ್ಕತ್ತಾ: ಎಸ್ಎಸ್ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ತೃಣಮೂಲ ಕಾಂಗ್ರೆಸ್ ಶಾಸಕ ಜಿಬಾನ್ ಕೃಷ್ಣ ಸಹಾ ಅವರ ಮುರ್ಷಿದಾಬಾದ್ ನಿವಾಸದ ಮೇಲೆ ವ್ಯಾಪಕ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ, ಐದು ಗಂಟೆಗಳ ತೀವ್ರ ಶೋಧದ ನಂತರ ಅವರನ್ನು ಬಂಧಿಸಿದೆ.
ಈ ದಾಳಿಯ ವೇಳೆ, ಗೋಡೆ ಏರಿದ ತೃಣಮೂಲ ಕಾಂಗ್ರೆಸ್ ಶಾಸಕ ಜಿಬಾನ್ ಕೃಷ್ಣ ಸಹಾ, ತಮ್ಮ ಮೊಬೈಲ್ ಅನ್ನು ಪೊದೆಗಳೊಳಕ್ಕೆ ಎಸೆದ ಘಟನೆಯೂ ನಡೆದಿದೆ.
ಜಾರಿ ನಿರ್ದೇಶನಾಲಯದ ದಾಳಿಯ ವೇಳೆ ಆರೋಪಿ ಜಿಬಾನ್ ಕೃಷ್ಣ ಸಹಾ ತನಿಖೆಗೆ ಸಹಕರಿಸಲಿಲ್ಲ ಎಂದು ಆರೋಪಿಸಲಾಗಿದೆ. ಅಧಿಕಾರಿಗಳಿಂದ ತಪ್ಪಿಸಿಕೊಳ್ಳುರವ ಪ್ರಯತ್ನದಲ್ಲಿ ಅವರು ಗೋಡೆಯೊಂದನ್ನು ಹಾರಿ, ತಮ್ಮ ಮೊಬೈಲ್ ಫೋನ್ ಅನ್ನು ತಮ್ಮ ನಿವಾಸದ ಹಿಂದಿನ ಪೊದೆಗಳೊಳಕ್ಕೆ ಎಸೆದರು. ನಂತರ ಆ ಫೋನ್ ಅನ್ನು ವಶಪಡಿಸಿಕೊಳ್ಳಅಲಾಯಿತು ಎಂದು ಈಡಿ ಅಧಿಕಾರಿಗಳು ತಿಳಿಸಿದ್ದಾರೆ.
2023ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತಮ್ಮ ನಿವಾಸದ ಮೇಲೆ ದಾಳಿ ನಡೆಸಿದ್ದಾಗಲೂ ಕೂಡಾ ಬುರ್ವಾನ್ ನ ಶಾಸಕರೂ ಆದ ಜಿಬಾನ್ ಕೃಷ್ಣ ಸಹಾ ತಮ್ಮ ಎರಡು ಮೊಬೈಲ್ ಫೋನ್ ಗಳನ್ನು ಕೊಳವೊಂದಕ್ಕೆ ಎಸೆದಿದ್ದರು.
ಜಿಬಾನ್ ಕೃಷ್ಣ ಸಹಾ ಅವರ ಮಾವ ರಘುನಾಥ್ ಗಂಜ್ ರ ಮುರ್ಷಿದಾಬಾದ್ ನಿವಾಸ ಸೇರಿದಂತೆ ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಸೈಂತಿಯಾ ಮಹಾನಗರ ಪಾಲಿಕೆಯ ವಾರ್ಡ್ ನಂ. 9ರ ತೃಣಮೂಲ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಹಾಗೂ ಜಿಬಾನ್ ಕೃಷ್ಣ ಸಹಾ ಅವರ ಚಿಕ್ಕಮ್ಮ ಮಾಯಾ ಸಹಾರ ನಿವಾಸದಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಇದರೊಂದಿಗೆ, ಪುರುಲಿಯಾದಲ್ಲಿರುವ ಆರೋಪಿ ಪ್ರಸನ್ನ ರಾಯ್ ರ ನಿವಾಸದ ಮೇಲೂ ಜಾರಿ ನಿರ್ದೇಶನಾಲಯದ ತಂಡವೊಂದು ದಾಳಿ ನಡೆಸಿದೆ. ಎಸ್ಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಆರೋಪ ಎದುರಿಸುತ್ತಿರುವ ಪ್ರಸನ್ನ ರಾಯ್ ಸದ್ಯ ಜೈಲಿನಲ್ಲಿದ್ದಾರೆ.
ಇದಕ್ಕೂ ಮುನ್ನ, ಅವರ ವಿವಿಧ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.







