ತ್ರಿಪುರಾ ವಿದ್ಯಾರ್ಥಿಯ ಹತ್ಯೆ | ದೇಶದಲ್ಲಿ ದ್ವೇಷ ಸಹಜವಾಗಿದೆ : ಬಿಜೆಪಿಯ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: ಡೆಹ್ರಾಡೂನ್ ನಲ್ಲಿ ಇಬ್ಬರು ತ್ರಿಪುರಾ ಮೂಲದ ಸಹೋದರರ ಮೇಲೆ ನಡೆದಿದ್ದ ಜನಾಂಗೀಯ ದಾಳಿಯಲ್ಲಿ, ಓರ್ವನನ್ನು ಹತ್ಯೆಗೈದಿರುವ ಘಟನೆಯನ್ನು ಖಂಡಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, “ದ್ವೇಷ ಕಾರುವ ನಾಯಕತ್ವವು ಹಿಂಸಾಚಾರದ ವಾತಾವರಣವನ್ನು ಸಹಜಗೊಳಿಸಿರುವುದರಿಂದ ಆಗಿರುವ ದ್ವೇಷಾಪರಾಧವಿದು” ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಡೆಹ್ರಾಡೂನ್ ನಲ್ಲಿ ಏಂಜೆಲ್ ಚಕ್ಮಾ ಹಾಗೂ ಆತನ ಸಹೋದರ ಮೈಕಲ್ ಚಕ್ಮಾಗೆ ಏನಾಗಿದೆಯೊ ಅದು ಭಯಾನಕ ದ್ವೇಷಾಪರಾಧ. ದ್ವೇಷ ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ನಮ್ಮ ಜನರಿಗೆ ದಿನನಿತ್ಯವೂ ವಿಷಕಾರಿ ತುಣುಕುಗಳು ಹಾಗೂ ಹೊಣೆಗೇಡಿ ನಿರೂಪಣೆಯ ಮೂಲಕ ದ್ವೇಷವನ್ನು ಉಣಿಸಲಾಗುತ್ತಿದೆ ಹಾಗೂ ಇದನ್ನು ಬಿಜೆಪಿಯ ದ್ವೇಷ ಕಾರುವ ನಾಯಕತ್ವವು ಸಹಜಗೊಳಿಸಿದೆ” ಎಂದು ಅವರು ಆರೋಪಿಸಿದ್ದಾರೆ.
“ಭಾರತವನ್ನು ಗೌರವ ಮತ್ತು ಒಗ್ಗಟ್ಟಿನ ಮೇಲೆ ನಿರ್ಮಿಸಲಾಗಿದೆಯೆ ಹೊರತು ಭಯ ಮತ್ತು ನಿಂದನೆಯ ಮೇಲಲ್ಲ. ನಮ್ಮದು ಪ್ರೀತಿ ಮತ್ತು ವೈವಿಧ್ಯತತೆಯ ದೇಶವಾಗಿದೆ. ಭಾರತದ ಸಹ ಪ್ರಜೆಗಳನ್ನೇ ಗುರಿಯಾಗಿಸಿಕೊಂಡಾಗ ಅದನ್ನು ನೋಡದೆ ನಾವು ಮೃತ ಸಮಾಜವಾಗಬಾರದು” ಎಂದು ಹೇಳಿದ್ದಾರೆ.
ಡಿ.9ರಂದು ಡೆಹ್ರಾಡೂನ್ ನಲ್ಲಿ ಜನಾಂಗೀಯ ನಿಂದನೆಯನ್ನು ಆಕ್ಷೇಪಿಸಿದ್ದಕ್ಕಾಗಿ ಆರು ಜನರ ಗುಂಪೊಂದು ಪಶ್ಚಿಮ ತ್ರಿಪುರ ಜಿಲ್ಲೆಯ 24 ವರ್ಷದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 26ರಂದು ಮೃತಪಟ್ಟಿದ್ದನು. ಈ ಘಟನೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







