ಭಾರತ-ಪಾಕ್ ಸಂಘರ್ಷದ ವೇಳೆ 5 ಜೆಟ್ಗಳನ್ನು ಹೊಡೆದುರುಳಿಸಲಾಗಿದೆ : ಡೊನಾಲ್ಡ್ ಟ್ರಂಪ್

Photo Credit: AP
ಹೊಸದಿಲ್ಲಿ : ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಸಮಯದಲ್ಲಿ 4 ರಿಂದ 5 ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ರಿಪಬ್ಲಿಕನ್ ಪಕ್ಷದ ಶಾಸಕರೊಂದಿಗಿನ ಭೋಜನಕೂಟದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಸಮಯದಲ್ಲಿ 4 ರಿಂದ 5 ಜೆಟ್ಗಳನ್ನು ಹೊಡೆದುರುಳಿಸಲಾಗಿದೆ. ಎರಡು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ಯುದ್ಧ ವಿಮಾನಗಳು ಯಾವ ದೇಶಕ್ಕೆ ಸೇರಿದ್ದು ಎಂಬುದನ್ನು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿಲ್ಲ.
ʼವಾಸ್ತವವಾಗಿ, ಹಾರಾಟದ ಸಂದರ್ಭದಲ್ಲೇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ನಾಲ್ಕು ಅಥವಾ ಐದು ಇರಬಹುದು. ಆದರೆ, ಐದು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ನಂತರ, ಏರ್ ಮಾರ್ಷಲ್ ಎ.ಕೆ. ಭಾರ್ತಿ, ಪಾಕಿಸ್ತಾನದ ಫೈಟರ್ ಜೆಟ್ಗಳನ್ನು ಭಾರತ ಹೊಡೆದುರುಳಿಸಿದೆ ಎಂದು ಹೇಳಿದ್ದರು. ಆದರೆ, ಪಾಕಿಸ್ತಾನ ಈ ಹೇಳಿಕೆಯನ್ನು ನಿರಾಕರಿಸಿತ್ತು. ಪಾಕಿಸ್ತಾನ ವಾಯುಪಡೆಯ ಒಂದು ವಿಮಾನಕ್ಕೆ ಮಾತ್ರ ಸ್ವಲ್ಪ ಹಾನಿ ಅನುಭವಿಸಿದೆ ಎಂದು ಹೇಳಿತ್ತು. ರಫೇಲ್ ಸೇರಿದಂತೆ ಆರು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿಹಾಕಿದ್ದರು.







