ಮೋದಿ ಯುಗದಲ್ಲಿ ಸತ್ಯವೇ ದೊಡ್ಡ ಗಾಯಾಳು: ಅರ್ಫಾ ಖಾನುಮ್ ಶೆರ್ವಾನಿ ಆರೋಪ
ಅರ್ಫಾ ಖಾನುಮ್ ಶೆರ್ವಾನಿ
ಹೊಸದಿಲ್ಲಿ: ಸಾರ್ವಜನಿಕರಿಗೆ ಮುಕ್ತ ಮಾಹಿತಿ ಹರಿವನ್ನು ತಡೆ ಹಿಡಿಯಲಾಗಿದ್ದು, ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯವನ್ನು ಹತ್ತಿಕ್ಕಲಾಗುತ್ತಿದೆ ಹಾಗೂ ಮಾಹಿತಿ ಇರುವ ಆಯ್ಕೆಗಳನ್ನು ಒದಗಿಸುತ್ತಿದೆ ಎಂದು ಗುರುವಾರ ಹೆಸರಾಂತ ಪತ್ರಕರ್ತೆ ಅರ್ಫಾ ಖಾನುಮ್ ಶೆರ್ವಾನಿ ಆರೋಪಿಸಿದ್ದಾರೆ.
“ಭಾರತವು ಸಾರ್ವತ್ರಿಕ ಚುನಾವಣೆಯತ್ತ ಮುಖ ಮಾಡಿದ್ದು, ಮುಕ್ತ ಪತ್ರಿಕೋದ್ಯಮವಿಲ್ಲದೆ ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಸಾಧ್ಯವಿಲ್ಲ” ಎಂದು ಕೇರಳದಲ್ಲಿ ಎಂ.ಆರ್.ನಾರಾಯಣ ಕುರುಪ್ ಸ್ಮರಣಾರ್ಥವಾಗಿ ಏರ್ಪಡಿಸಿದ್ದ “ಮಾಧ್ಯಮ ಏಕಸ್ವಾಮ್ಯತೆ, ಕೋಮುವಾದೀಕರಣ ಹಾಗೂ ಪ್ರಜಾತಂತ್ರದ ಭವಿಷ್ಯ’ ಎಂಬ ವಿಷಯದ ಕುರಿತ ಎರಡನೆ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕಾರ್ಯಕ್ರಮವನ್ನು ವಡಕರದ ಮಾದಪ್ಪಲ್ಲಿ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಮೋದಿ ಯುಗದಲ್ಲಿ ಪಾರಂಪರಿಕ ಮಾಧ್ಯಮಗಳು ಕೊನೆಯುಸಿರೆಳೆಯುವ ಹಂತದಲ್ಲಿವೆ ಎಂದು The Wire ಸುದ್ದಿ ಸಂಸ್ಥೆಯ ಹಿರಿಯ ಸಂಪಾದಕಿಯೂ ಆಗಿರುವ ಅರ್ಫಾ ಖಾನುಮ್ ಶೆರ್ವಾನಿ ಆತಂಕ ವ್ಯಕ್ತಪಡಿಸಿದ್ದಾರೆ.
“ಹಲವಾರು ಮಾಧ್ಯಮ ಸಂಸ್ಥೆಗಳು ಬಹುಸಂಖ್ಯಾತತ್ವ ಕಾರ್ಯಸೂಚಿಯ ಭಾಗವಾಗಿದ್ದು, ಈ ಪೈಕಿ ಕೆಲವು ಸರ್ಕಾರ ಹಾಗೂ ಅದರ ನೀತಿಗಳನ್ನು ಪ್ರಶ್ನಿಸದೆ ಸುರಕ್ಷಿತ ಆಟದ ಮೊರೆ ಹೋಗಿವೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಭಾರತದಲ್ಲಿ ಪ್ರಜಾತಂತ್ರದ ಬಿಕ್ಕಟ್ಟು ಪತ್ರಿಕೋದ್ಯಮದ ಬಿಕ್ಕಟ್ಟಿನೊಂದಿಗೆ ಪ್ರಾರಂಭಗೊಂಡಿದೆ. ಈ ಯುಗದಲ್ಲಿ ಸತ್ಯವೇ ಬಹು ದೊಡ್ಡ ಗಾಯಾಳು. ದಿನ ನಿತ್ಯದ ಪ್ರಧಾನ ಅವಧಿಯ ದೂರದರ್ಶನ ಚರ್ಚೆಗಳು ಬಹುಸಂಖ್ಯಾತತ್ವ ಕಾರ್ಯಸೂಚಿಯನ್ನು ಮುಂದೂಡುತ್ತಿದ್ದು, ಯುವ ಹಿಂದೂ ಪೀಳಿಗೆಯಲ್ಲಿ ನಿರಂತರವಾಗಿ ಕ್ಷೋಭೆ ಮತ್ತು ಅಭದ್ರತೆಯನ್ನು ಸೃಷ್ಟಿಸುತ್ತಿವೆ. ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಪರಕೀಯರು ಕೀಳಾಗಿಸಿದ್ದಾರೆ ಮತ್ತು ಕದ್ದಿದ್ದಾರೆ ಎಂಬ ಭಾವನೆಯನ್ನು ಅವರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ” ಎಂದು ಅವರು ದೂರಿದ್ದಾರೆ.
“ಭಾರತದಲ್ಲಿನ ನರೇಂದ್ರ ಮೋದಿ ಆಡಳಿತವು ಮಾಧ್ಯಮಗಳ ಕೈವಶ, ನಿಯಂತ್ರಣ ಹಾಗೂ ಕತ್ತು ಹಿಸುಕುವ ಗಾಥೆಯಾಗಿದೆ. ಸಾಂವಿಧಾನಿಕ ಸಂಸ್ಥೆಗಳ ಅಧೀನತೆ ಹಾಗೂ ಮುಖ್ಯ ವಾಹಿನಿಯ ಬಹುತೇಕ ಮಾಧ್ಯಮಗಳ ಶರಣಾಗತಿ ನರೇಂದ್ರ ಮೋದಿಯ ನಿರಂಕುಶಾಧಿಕಾರದ ವಿರುದ್ಧದ ಪ್ರತಿರೋಧವು ಕೊಂಚ ಮಾತ್ರ ಇರುವಂತೆ ಖಾತರಿಗೊಳಿಸಿವೆ” ಎಂದು ಅವರು ಹೇಳಿದ್ದಾರೆ.