ನಿರೂಪಕ ಸುಧೀರ್ ಚೌಧರಿಗೆ 14 ಕೋಟಿ ರೂ. ಪ್ಯಾಕೇಜ್ ಆಫರ್ ನೀಡಿದ ಡಿಡಿ ನ್ಯೂಸ್?

ಹೊಸದಿಲ್ಲಿ : ಹಿಂದಿ ಸುದ್ದಿ ವಾಹಿನಿ ಆಜ್ ತಕ್‌ನ ಪ್ರೈಮ್ ಟೈಮ್ ಕಾರ್ಯಕ್ರಮದ ನಿರೂಪಕ ಸುಧೀರ್ ಚೌಧರಿ ಏಪ್ರಿಲ್‌ನಿಂದ ಸರಕಾರಿ ಸ್ವಾಮ್ಯದ ಡಿಡಿ ನ್ಯೂಸ್‌ಗೆ ಸೇರುವ ಸಾಧ್ಯತೆಯಿದೆ ಎಂದು freepressjournal ವರದಿ ಮಾಡಿದೆ.
ಪ್ರಸ್ತುತ ಆಜ್ ತಕ್‌ನಲ್ಲಿ ರಾತ್ರಿ 9 ರಿಂದ 10ರವರೆಗೆ ಪ್ರಸಾರವಾಗುವ 'ಬ್ಲ್ಯಾಕ್ & ವೈಟ್' ಕಾರ್ಯಕ್ರಮವನ್ನು ಸುಧೀರ್ ಚೌಧರಿ ನಿರೂಪಣೆ ಮಾಡುತ್ತಿದ್ದಾರೆ. ಡಿಡಿ ನ್ಯೂಸ್ ಅವರಿಗೆ 14 ಕೋಟಿ ರೂ. ವಾರ್ಷಿಕ ಪ್ಯಾಕೇಜ್ ಆಫರ್ ನೀಡಿದೆ ಎಂದು ಹೇಳಲಾಗಿದೆ.
ಈ ಕುರಿತು ಪತ್ರಕರ್ತೆ ಶ್ರುತಿ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮೂಲಗಳ ಪ್ರಕಾರ ಸುಧೀರ್ ಚೌಧರಿ ಈ ವರ್ಷದ ಏಪ್ರಿಲ್‌ನಿಂದ ಡಿಡಿ ನ್ಯೂಸ್‌ಗೆ ಸೇರುತ್ತಿದ್ದಾರೆ. ತೆರಿಗೆದಾರರ ಹಣದಿಂದ 14 ಕೋಟಿ ರೂ. ಪ್ಯಾಕೇಜ್ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಝೀ ಮೀಡಿಯಾದಲ್ಲಿ ಪ್ರಧಾನ ಸಂಪಾದಕ ಮತ್ತು ಸಿಇಒ ಆಗಿದ್ದ ಸುಧೀರ್ ಚೌಧರಿ, ಜೂನ್ 2022ರಲ್ಲಿ ಝೀ ನ್ಯೂಸ್ ತೊರೆದು ಆಜ್ ತಕ್‌ನ ಸಲಹಾ ಸಂಪಾದಕರಾಗಿ ಸೇರ್ಪಡೆಗೊಂಡಿದ್ದರು. ನಿರೂಪಕರಾಗಿ ಸುಧೀರ್ ಚೌಧರಿ ಹಲವು ಬಾರಿ ವಿವಾದವನ್ನು ಸೃಷ್ಟಿಸಿದ್ದರು. ಸೆಪ್ಟೆಂಬರ್ 2023ರಲ್ಲಿ ಆಜ್‌ತಕ್ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಕೋಮು ಸಾಮರಸ್ಯ ಧಕ್ಕೆ ಆರೋಪದಲ್ಲಿ ಕರ್ನಾಟಕ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಕಳೆದ ಜನವರಿಯಲ್ಲಿ ಬುಡಕಟ್ಟು ಸಮುದಾಯದ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಜಾರ್ಖಂಡ್‌ನಲ್ಲಿ ಸುಧೀರ್ ಚೌಧರಿ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜಾರ್ಖಂಡ್ ಹೈಕೋರ್ಟ್ ಅವರಿಗೆ ಪ್ರಕರಣದಲ್ಲಿ ರಿಲೀಫ್ ನೀಡಿತ್ತು.
ಸುಧೀರ್ ಚೌಧರಿ ಡಿಡಿ ನ್ಯೂಸ್‌ಗೆ ಸೇರುವ ಬಗ್ಗೆ ಊಹಾಪೋಹಗಳಿಂದ ಸರಕಾರ ಸಾರ್ವಜನಿಕ ವಲಯದ ಸುದ್ದಿ ವಾಹಿನಿಯನ್ನು ಖಾಸಗಿ ಸುದ್ದಿ ವಾಹಿನಿಯಾಗಿ ಪರಿವರ್ತಿಸಲು ಯೋಜಿಸುತ್ತಿದೆಯೇ ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.







