Tamil Nadu | ಮಾಜಿ ಸಿಎಂ ಸ್ಟಾಲಿನ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದ್ದ TVK ಶಾಸಕ ವಿ.ಎಸ್. ಬಾಬು ಹೃದಯಾಘಾತದಿಂದ ನಿಧನ

ಶಾಸಕ ವಿ.ಎಸ್. ಬಾಬು (Photo: India Today)
ಚೆನ್ನೈ: ಕೊಳತ್ತೂರು ಕ್ಷೇತ್ರದ ಶಾಸಕ ವಿ.ಎಸ್. ಬಾಬು ಅವರು ಗುರುವಾರ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವಿ.ಎಸ್. ಬಾಬು ಅವರನ್ನು ಸೆಪ್ಟೆಂಬರ್ 9ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕಳೆದ 70 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಎಸ್ ಬಾಬು, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು 8,795 ಮತಗಳ ಅಂತರದಿಂದ ಸೋಲಿಸಿದ್ದರು. 2011ರಿಂದ ಸ್ಟಾಲಿನ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಬಾಬು ಅವರು 2006ರಿಂದ 2011ರವರೆಗೆ ಪುರಸೈವಾಕ್ಕಂ ಕ್ಷೇತ್ರದ ಡಿಎಂಕೆ ಶಾಸಕರಾಗಿದ್ದರು. 2016ರಲ್ಲಿ ಎಐಎಡಿಎಂಕೆ ಸೇರ್ಪಡೆಯಾಗಿದ್ದ ಅವರು 2026ರಲ್ಲಿ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ತದನಂತರ ಟಿವಿಕೆ ಪಕ್ಷವು ಕೊಳತ್ತೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಅವರನ್ನು ಕಣಕ್ಕಿಳಿಸಿತ್ತು.




