“ಮೃತ ಮಗಳಿಗಿಂತ ವಿಚ್ಛೇದಿತ ಮಗಳು ಇರುವುದೇ ಉತ್ತಮ” : ತ್ವಿಶಾ ಶರ್ಮಾ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಪ್ರದೇಶ ಸರಕಾರ ಹೇಳಿಕೆ

ತ್ವಿಶಾ ಶರ್ಮಾ(PTI) , ಸುಪ್ರೀಂ ಕೋರ್ಟ್(sci.gov.in)
ಹೊಸದಿಲ್ಲಿ: ಮಾಜಿ ನಟಿ ತ್ವಿಶಾ ಶರ್ಮಾ ಅವರ ಸಾವಿನ ಕುರಿತು ವಿಚಾರಣೆಯ ವೇಳೆ ಮಧ್ಯಪ್ರದೇಶ ಸರಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ʼಮೃತ ಮಗಳಿಗಿಂತ ವಿಚ್ಛೇದಿತ ಮಗಳು ಇರುವುದೇ ಉತ್ತಮʼ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ನೀಡಿರುವ ಈ ಹೇಳಿಕೆ ಎಲ್ಲರ ಗಮನ ಸೆಳೆದಿದೆ.
ನಟಿ ತ್ವಿಶಾ ಶರ್ಮಾ ಅವರ ಸಾವಿನ ಬಗ್ಗೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಈ ಪ್ರಕರಣದ ಕುರಿತು ಸಿಬಿಐ ತನಿಖೆಯನ್ನು ಶಿಫಾರಸು ಮಾಡುವ ಮಧ್ಯಪ್ರದೇಶ ಸರಕಾರದ ನಿರ್ಧಾರವನ್ನು ಬೆಂಬಲಿಸಿದೆ.
ಈ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ, ಈ ಪ್ರಕರಣದ ಕುರಿತು "ಸ್ವತಂತ್ರ ಸಂಸ್ಥೆ" ತನಿಖೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದೆ.
33 ವರ್ಷದ ತ್ವಿಶಾ ಶರ್ಮಾ ಮೇ 12 ರಂದು ಭೋಪಾಲ್ನಲ್ಲಿರುವ ತನ್ನ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಕುಟುಂಬವು ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪ ಹೊರಿಸಿತ್ತು. ಆದರೆ ಆಕೆ ಮಾದಕ ವ್ಯಸನಕ್ಕೆ ಒಳಗಾಗಿದ್ದಳು ಎಂದು ಆಕೆಯ ಪತಿ ಕುಟುಂಬಸ್ಥರು ಆರೋಪಿಸಿದ್ದರು.
ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ರಾಜ್ಯ ಸರಕಾರದ ಕ್ರಮವನ್ನು ಶ್ಲಾಘಿಸಿದ ಮುಖ್ಯ ನ್ಯಾಯಮೂರ್ತಿ, "ಸಿಬಿಐ ತನಿಖೆಯನ್ನು ಶಿಫಾರಸು ಮಾಡುವ ರಾಜ್ಯದ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ" ಎಂದು ಹೇಳಿದರು.
ವಿಚಾರಣೆಯ ಸಮಯದಲ್ಲಿ, ಮಧ್ಯಪ್ರದೇಶ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಪೋಷಕರಿಗೆ ನೀತಿ ಪಾಠ ಏನೆಂದರೆ, ಮೃತ ಮಗಳಿಗಿಂತ ವಿಚ್ಛೇದಿತ ಮಗಳು ಇರೋದೇ ಉತ್ತಮ” ಎಂದು ಹೇಳಿದರು. ‘ಮಗಳು ಮೃತಪಟ್ಟಿರುವುದನ್ನು ನೋಡುವುದಕ್ಕಿಂತ, ಆಕೆ ವಿಚ್ಛೇದನ ಪಡೆದು ಬದುಕಿರುವುದೇ ಎಷ್ಟೋ ಮೇಲು’ ಎಂಬ ಅರ್ಥದಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ.






