ಇಬ್ಬರು ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ: ದಿಲ್ಲಿ ಪೊಲೀಸರ ವಿರುದ್ಧ ವಿಪಕ್ಷಗಳ ವಾಗ್ದಾಳಿ

Photo Credit : X
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಪ್ರಶ್ನಿಸಲು ಯತ್ನಿಸಿದ್ದ ಇಬ್ಬರು ಪತ್ರಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಸಾಕೇತ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ 4ಪಿಎಂ ನ್ಯೂಸ್ ನೆಟ್ವರ್ಕ್ ನ ಪತ್ರಕರ್ತೆಯೊಬ್ಬರು ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ದಿಲ್ಲಿಯಲ್ಲಿ ಸುದ್ದಿ ವರದಿಗಾಗಿ ತೆರಳಿದ್ದ ತಮ್ಮನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದು ಹಲ್ಲೆ ನಡೆಸಿದ್ದಾರೆ ಎಂದು ಸ್ವತಂತ್ರ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಆರೋಪಿಸಿದ್ದಾರೆ. ಘಟನೆಯ ಬಳಿಕ ವೈದ್ಯಕೀಯ ಪರೀಕ್ಷೆ ಹಾಗೂ ಗಾಯಗಳ ವೈದ್ಯಕೀಯ ಪ್ರಮಾಣಪತ್ರ ಪಡೆಯಲು ಏಮ್ಸ್ಗೆ ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ಶಾಹೀನ್ ಖಾನ್ ಅವರು ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ತಮ್ಮನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಥಳಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹೆಸರು ಕೇಳಿದರು. ತಮ್ಮ ಹೆಸರಿನಲ್ಲಿ ‘ಖಾನ್’ ಎಂಬ ಪದವಿದೆ ಎಂದು ತಿಳಿದ ಬಳಿಕ ತಮ್ಮ ಮೇಲೆ ಹಲ್ಲೆ ನಡೆಸುವುದನ್ನು ಇನ್ನಷ್ಟು ತೀವ್ರಗೊಳಿಸಿದರು ಎಂದೂ ಶಾಹೀನ್ ಆರೋಪಿಸಿದ್ದಾರೆ.
4ಪಿಎಂ ನ್ಯೂಸ್ ನೆಟ್ವರ್ಕ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಪತ್ರಕರ್ತೆಯೊಬ್ಬರು ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಪ್ರಶ್ನಿಸಲು ಯತ್ನಿಸುತ್ತಿದ್ದರು ಎಂದು ನೆಟ್ವರ್ಕ್ ಹೇಳಿದೆ. ಪತ್ರಿಕಾ ಸ್ವಾತಂತ್ರ್ಯದ ವಿಚಾರವನ್ನು ಪ್ರಸ್ತಾಪಿಸಿರುವ ನೆಟ್ವರ್ಕ್, ಘಟನೆಯ ಕುರಿತು ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಪತ್ರಕರ್ತೆಯರ ಹಲ್ಲೆ ಆರೋಪವನ್ನು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ. ಆರೋಪಗಳು ‘ವಾಸ್ತವಾಂಶಕ್ಕೆ ವಿರುದ್ಧವಾದ ಮತ್ತು ದಾರಿ ತಪ್ಪಿಸುವಂತಿವೆ’ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಈ ಆರೋಪದ ಕುರಿತು ಆಡಳಿತಾರೂಢ ಬಿಜೆಪಿ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಆಪ್ ನಾಯಕ ಸೌರಭ್ ಭಾರದ್ವಾಜ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ‘ಮಹಿಳಾ ಮುಖ್ಯಮಂತ್ರಿ ರೇಖಾ ಗುಪ್ತಾ ನಾಚಿಕೆಪಡಬೇಕು’ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಕೂಡ ವೈರಲ್ ವೀಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದೆ. ‘ಬಿಜೆಪಿ ಸರ್ಕಾರ ಹಾಗೂ ದಿಲ್ಲಿ ಪೊಲೀಸರ ಕೊಲೆಗಡುಕತನ’ ಎಂದು ವೀಡಿಯೊಗೆ ಶೀರ್ಷಿಕೆ ನೀಡಿರುವ ಕಾಂಗ್ರೆಸ್, ದಿಲ್ಲಿ ಪೊಲೀಸರ ವರ್ತನೆ ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಖಂಡಿಸಿದೆ. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.






