ಭೂಗತ ಪಾತಕಿ ಬಿಷ್ಣೋಯಿ ತಂಡದ ಇಬ್ಬರು ಸದಸ್ಯರ ಬಂಧನ

ಚಂಡಿಗಢ (ಪಂಜಾಬ್), ಆ. 14: ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಇಬ್ಬರು ಸದಸ್ಯರನ್ನು ಪಂಜಾಬ್‌ನ ಗಾಂಗ್‌ಸ್ಟರ್ ನಿಗ್ರಹ ದಳ(ಎಜಿಟಿಎಫ್)ವು ಪಾಟಿಯಾಲದ ಶಂಬು ಗ್ರಾಮದ ಸಮೀಪದ ಪಾಟಿಯಾಲ-ಅಂಬಾಲ ಹೆದ್ದಾರಿಯಲ್ಲಿ ಬಂಧಿಸಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಗುರುವಾರ ತಿಳಿಸಿದ್ದಾರೆ.
ಬಂಧಿತರನ್ನು ಅಕ್ಷಯ್ ಡೆಲು ಹಾಗೂ ಅಂಕಿತ್ ಬಿಷ್ಣೋಯಿ ಆಲಿಯಾಸ್ ಕಕ್ಕರ್ ಎಂದು ಗುರುತಿಸಲಾಗಿದೆ. ಇಬ್ಬರು ಫಝಿಲ್ಕಾದ ಅಬೋಹರ್ ಉಪ ವಿಭಾಗದ ಖೈರ್‌ಪುರ ಗ್ರಾಮದ ನಿವಾಸಿಗಳು. ಬಂಧಿತ ಆರೋಪಿಗಳು ಅನ್ಮೋಲ್ ಬಿಷ್ಣೋಯಿ ಹಾಗೂ ಆರ್ಝೂ ಬಿಷ್ಣೋಯಿ ಎಂದು ಗುರುತಿಸಲಾದ ವಿದೇಶಿ ಮೂಲದ ತಮ್ಮ ಪ್ರತಿನಿಧಿಗಳ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದರು.
ಎಜಿಟಿಎಫ್ ಅವರಿಂದ ಒಂದು ಗ್ಲೋಕ್ 9 ಎಂಎಂ ಪಿಸ್ತೂಲ್ ಹಾಗೂ 6 ಸಜೀವ ಕಾಟ್ರಿಜ್‌ಗಳನ್ನು ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಸಾಹೀಬ್‌ಝಾದಾ ಅಜಿತ್ ಸಿಂಗ್ (ಎಸ್‌ಎಎಸ್) ನಗರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ ಆರೋಪಿಗಳನ್ನು ವ್ಯಕ್ತಿಯೋರ್ವರು ಹತ್ಯೆಗೈದು ನೇಪಾಳಕ್ಕೆ ಪರಾರಿಯಾಗಿದ್ದರು ಹಾಗೂ ಪಂಜಾಬ್‌ನಲ್ಲಿ ಅಪರಾಧ ಎಸಗಲು ಹಿಂದಿರುಗಿದ್ದರು.
ಇಬ್ಬರು ಆರೋಪಿಗಳು ಅಪರಾಧದ ಇತಿಹಾಸ ಹೊಂದಿದ್ದಾರೆ. ಅವರ ವಿರುದ್ಧ ಪಂಜಾಬ್, ದಿಲ್ಲಿ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ವಿವಿಧ ಕ್ರಿಮಿನಲ್ ಕಾಯ್ಡೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫಜಿಲ್ಕಾದಲ್ಲಿ ಇತ್ತೀಚೆಗೆ ನಡೆದ ಭರತ್ ರತನ್ ಆಲಿಯಾಸ್ ವಿಕ್ಕಿಯ ಹತ್ಯೆ ಪ್ರಕರಣದಲ್ಲಿ ಕೂಡ ಇವರು ಬೇಕಾದವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.







