ದಿಲ್ಲಿಯಲ್ಲಿ ಕಾರು ಅಪಘಾತ: ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿದಂತೆ 6 ಜನರಿಗೆ ಗಾಯ

Photo Credit: PTI
ಹೊಸದಿಲ್ಲಿ: ರವಿವಾರ ರಾತ್ರಿ ಕೇಂದ್ರ ದಿಲ್ಲಿಯ ಲೋಕೋಪಯೋಗಿ ಇಲಾಖೆಯ ಕಚೇರಿ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್, ಕಿರಾರಿಯ ಹಾಲಿ ಶಾಸಕ ಅನಿಲ್ ಝಾ ಸೇರಿದಂತೆ ಒಟ್ಟು 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ರಾತ್ರಿ ಸುಮಾರು 9.30ರ ವೇಳೆ ಈ ಅಪಘಾತ ಸಂಭವಿಸಿದ್ದು, ಲಕ್ಷ್ಮಿನಗರದಿಂದ ಐಟಿಒ ಕಡೆ ತೆರಳುತ್ತಿದ್ದ ಕಾರೊಂದು ರಸ್ತೆ ವಿಭಜಕವನ್ನು ದಾಟಿ ಎದುರು ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, 32 ವರ್ಷದ ಆಶುತೋಷ್ ಪಾಂಡೆ ಈ ಕಾರು ಚಲಾಯಿಸುತ್ತಿದ್ದು, ಅವರೊಂದಿಗೆ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಪ್ರಯಾಣಿಸುತ್ತಿದ್ದರು. ಇನ್ನೋವಾ ಕಾರಿನಲ್ಲಿ ಅನಿಲ್ ಝಾ ಮತ್ತು ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಘಟನೆಯಲ್ಲಿ ಎಲ್ಲಾ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನೆಲ್ಲ ಚಿಕಿತ್ಸೆಗಾಗಿ ಲೋಕನಾಯಕ್ ಜಯಪ್ರಕಾಶ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲ್ಲ ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.






