ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಹುತಾತ್ಮ

PC: x.com/Whiteknight_IA
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಉಗ್ರರ ಜತೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಖತುವಾದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ನಲ್ಲಿ ರೈಸಿಂಗ್ ಸ್ಟಾರ್ ಕಾಪ್ಸ್ ನ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಗುಪ್ತಚರ ವರದಿಗಳನ್ನು ಆಧರಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆಗೂಡಿ ಸೇನೆ ಕಿಶ್ತ್ವಾರ್ ನ ಛತ್ರೂ ಎಂಬಲ್ಲಿ ಕಾರ್ಯಾಚರಣೆ ನಡೆಸಿತ್ತು. ಮಧ್ಯಾಹ್ನ 3.30ರ ವೇಳೆಗೆ ಉಗ್ರರ ಜತೆ ಸಂಪರ್ಕ ಏರ್ಪಟ್ಟಿತು. ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟರು ಎಂದ ಸೇನೆ ಹೇಳಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದೆ.
ಕಿಶ್ತ್ವಾರ್ ನಲ್ಲಿ ಸೇನೆಯತ್ತ ಗುಂಡು ಹಾರಿಸಿದ ಉಗ್ರರ ತಂಡ ಜುಲೈನಲ್ಲಿ ದೋಡಾದಲ್ಲೂ ಇಂಥದ್ದೇ ದಾಳಿ ನಡೆಸಿ, ಸೇನೆಯ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರನ್ನು ಹತ್ಯೆ ಮಾಡಿತ್ತು.
ಚೆನಾಬ್ ಕಣಿವೆ ಪ್ರದೇಶದ ದೋಡಾ, ಕಿಶ್ತ್ವಾರ್ ಮತ್ತು ರಾಮಬನ್ ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಕೆಲವೇ ದಿನಗಳ ಮುನ್ನ ಈ ಚಕಮಕಿ ನಡೆದಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ, ಶೋಪಿಯಾನ್ ಮತ್ತು ಕುಲಗಾಂವ್ ಜಿಲ್ಲೆಯ 16 ಸ್ಥಾನಗಳಿಗೆ ಕೂಡಾ ಸೆಪ್ಟೆಂಬರ್ 18ರಂದು ಮತದಾನ ನಡೆಯಲಿದೆ.
#IndianArmy #GOC White Knight Corps and all ranks salute the supreme sacrifice of the #Bravehearts; offer deepest condolences to the families. @NorthernComd_IA@adgpi@SpokespersonMoD pic.twitter.com/MRV4CLBTWE
— White Knight Corps (@Whiteknight_IA) September 13, 2024