ದ್ವಿಚಕ್ರ ವಾಹನಕ್ಕೆ ಟೋಲ್ ಎಂದು ಸುಳ್ಳು ಸುದ್ದಿ; Fact Check ಮಾಡುವಾಗ ಇಂಡಿಯಾ ಟುಡೆ, ಟಿವಿ9 ಅನ್ನು ಕೈಬಿಟ್ಟ ಪಿಐಬಿ: ವ್ಯಾಪಕ ಅಸಮಾಧಾನ

PC : @PIBFactCheck
ಹೊಸದಿಲ್ಲಿ: ದ್ವಿಚಕ್ರ ವಾಹನಗಳಿಗೆ ಹೆದ್ದಾರಿ ಸುಂಕ ವಿಧಿಸಲಾಗುತ್ತದೆ ಎಂಬ ನಕಲಿ ಹಾಗೂ ದಾರಿ ತಪ್ಪಿಸುವ ಸುದ್ದಿಯನ್ನು ಪ್ರಸಾರ ಮಾಡಿದ್ದ ಪ್ರಮುಖ ಸುದ್ದಿ ವಾಹಿನಿಗಳಾದ ಇಂಡಿಯಾ ಟುಡೆ, ಟಿವಿ 9 ಭರತ್ ವರ್ಷ್ ಹಾಗೂ ಪಾಂಚಜನ್ಯವನ್ನು ತನ್ನ ಇತ್ತೀಚಿನ ನಕಲಿ ಸುದ್ದಿ ಪರಿಶೀಲನೆಯ ವೇಳೆ ಕೈಬಿಟ್ಟಿದ್ದಕ್ಕೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ, ಜುಲೈ 15ರಿಂದ ದ್ವಿಚಕ್ರ ವಾಹನಗಳಿಗೆ ಹೆದ್ದಾರಿ ಸುಂಕ ವಿಧಿಸಲಾಗುತ್ತದೆ ಎಂಬ ಸುದ್ದಿ ನಕಲಿಯಾಗಿದೆ. ಆದರೆ, ಇಂತಹ ಯಾವುದೇ ನಿರ್ದೇಶನವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿಲ್ಲ ಹಾಗೂ ಭವಿಷ್ಯದಲ್ಲಿ ದ್ವಿಚಕ್ರ ವಾಹನಗಳಿಗೆ ಹೆದ್ದಾರಿ ಸುಂಕ ವಿಧಿಸುವ ಯಾವುದೇ ಯೋಜನೆಯೂ ಇಲ್ಲ” ಎಂದು ಸ್ಪಷ್ಟಪಡಿಸಿತ್ತು.
ಆದರೆ, ಈ ಪೋಸ್ಟ್ ನಲ್ಲಿ ನಕಲಿ ಸುದ್ದಿ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಗಳ ಹೆಸರನ್ನು ಕೈಬಿಟ್ಟಿರುವ ಪಿಐಬಿಯ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಲ್ಟ್ ನ್ಯೂಸ್ ಸಂಸ್ಥೆಯ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್, ಆರಂಭದಲ್ಲಿ ಸುಳ್ಳು ಮಾಹಿತಿಗಳನ್ನು ಹರಡಿದ ಮುಖ್ಯಕ ವಾಹಿನಿ ಮಾಧ್ಯಮಗಳನ್ನು ಉತ್ತರದಾಯಿಗಳನ್ನಾಗಿಸುವಲ್ಲಿ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
“ಈ ನಕಲಿ ಸುದ್ದಿಯನ್ನು ಇಂಡಿಯಾ ಟುಡೆ, ಟಿವಿ9 ಭರತ್ ವರ್ಷ್ ಹಾಗೂ ಪಾಂಚಜನ್ಯದಂತಹ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ಆದರೆ, ಈ ಸುದ್ದಿ ವಾಹಿನಿಗಳ ಬದಲು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೆಯಾಗಿದ್ದ ಈ ಸುದ್ದಿಯ ಸ್ಕ್ರೀನ್ ಶಾಟ್ ಗಳನ್ನು ಮಾತ್ರ ಪಿಐಬಿ ಹಂಚಿಕೊಂಡಿದೆ” ಎಂದು ಆರೋಪಿಸಿರುವ ಝುಬೈರ್, ಸತ್ಯ ಶೋಧನೆಯಲ್ಲಿ ಸರಕಾರದ ಅಸ್ಥಿರ ಧೋರಣೆಯನ್ನು ಎತ್ತಿ ತೋರಿಸಿದ್ದಾರೆ.
ಈ ನಡುವೆ, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡಾ ಔಪಚಾರಿಕ ಪ್ರಕಟನೆ ಬಿಡುಗಡೆ ಮಾಡಿದ್ದು, ದ್ವಿಚಕ್ರ ವಾಹನಗಳ ಮೇಲೆ ಹೆದ್ದಾರಿ ಸುಂಕ ವಿಧಿಸುವ ಯಾವುದೇ ಪ್ರಸ್ತಾಪವನ್ನು ಸರಕಾರ ಪರಿಗಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗಿರುವ ಹೆದ್ದಾರಿ ಸುಂಕ ವಿನಾಯಿತಿ ಮುಂದುವರಿಯಲಿದ್ದು, ಪ್ರವೇಶ ನಿಯಂತ್ರಿತ ವೇಗದ ಹೆದ್ದಾರಿಗಳಲ್ಲಿ ಮಾತ್ರ ಅವುಗಳ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ ಎಂದೂ ಹೇಳಿದ್ದಾರೆ.
“ಮಾಧ್ಯಮ ಸಂಸ್ಥೆಗಳು ಅನಗತ್ಯ ಸಾರ್ವಜನಿಕ ಗೊಂದಲಗಳನ್ನು ಸೃಷ್ಟಿಸುವ ಪರಿಶೀಲನೆಗೊಳಗಾಗದ ಸುದ್ದಿಗಳನ್ನು ಹರಡುವುದರಿಂದ ದೂರ ಉಳಿಯಬೇಕು” ಎಂದುಅವರು ಮನವಿ ಮಾಡಿದ್ದಾರೆ.







