ದಿಲ್ಲಿ ಗಲಭೆಗೆ ಸಂಬಂಧಿಸಿದ ಯುಎಪಿಎ ಪ್ರಕರಣ : ಪೊಲೀಸರು ಸುಳ್ಳು ಪುರಾವೆಗಳನ್ನು ಸೃಷ್ಟಿಸಿದ್ದಾರೆ ಎಂದ ಉಮರ್ ಖಾಲಿದ್

Photo | livelaw
ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಯ ಪಿತೂರಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಐದು ವರ್ಷಗಳಿಂದ ಬಂಧನದಲ್ಲಿದ್ದೇನೆ ಎಂದು ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ , ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಅನ್ನು “ತಮಾಷೆ” ಎಂದು ಗುರುವಾರ ಕರೆದಿದ್ದಾರೆ. ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಸುಳ್ಳು ಪುರಾವೆಗಳನ್ನು ಸೃಷ್ಟಿಸಿದ್ದಾರೆ ಎಂದು ಉಮರ್ ಖಾಲಿದ್ ಹೇಳಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ ಪೇಯಿ ಅವರ ಮುಂದೆ ಹಿರಿಯ ವಕೀಲ ತ್ರಿದೀಪ್ ಪಾಯಿಸ್ ಅವರು ಉಮರ್ ಖಾಲಿದ್ ಪರವಾಗಿ ವಾದ ಮಂಡಿಸಿದರು. “ಈ ಪ್ರಕರಣದಲ್ಲಿ ಉಮರ್ ಖಾಲಿದ್ ಸೇರಿದಂತೆ ಹಲವರಿಗೆ ಯಾವುದೇ ನೇರ ಸಂಬಂಧವಿಲ್ಲ. ಸುಳ್ಳು ಹೇಳಿಕೆಗಳು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ತನಿಖಾ ಸಂಸ್ಥೆಯ ನಿಲುವು ಪಕ್ಷಪಾತದ್ದಾಗಿದೆ” ಎಂದು ವಾದ ಮಂಡಿಸಿದರು.
ಪಾಯಿಸ್ ಅವರ ಪ್ರಕಾರ, 2020ರ ಗಲಭೆಯಲ್ಲಿ 51 ಜನರು ಮೃತಪಟ್ಟಿರುವ ಕುರಿತು ಈಗಾಗಲೇ ಬೇರೆ ಎಫ್ಐಆರ್ಗಳು ದಾಖಲಾಗಿದ್ದು, ತನಿಖೆಯಲ್ಲಿವೆ. “ಅದೇ ವಿಷಯವನ್ನು ಪುನಃ ಯುಎಪಿಎ ಅಡಿಯಲ್ಲಿ ಸೇರಿಸುವುದು ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿದೆ. ಗಂಭೀರ ಆರೋಪಗಳನ್ನು ಹೊರಿಸಿದರೂ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ” ಎಂದು ಅವರು ಉಲ್ಲೇಖಿಸಿದರು.
ಪಾಯಿಸ್ ವಾದಿಸುತ್ತಾ, “ಪ್ರತಿಯೊಂದು ಎಫ್ಐಆರ್ ಸಾಮಾನ್ಯ ಅಥವಾ ನಿರ್ದಿಷ್ಟ ಸಂಬಂಧ ಹೊಂದಿರಬೇಕು. ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಸಂಬಂಧ ಇಲ್ಲ. ಪಿತೂರಿಯ ಆರೋಪ ನಿಜವಾಗಿದ್ದರೆ, ಅದು ಇತರ ಅಪರಾಧಗಳೊಂದಿಗೆ ಹೊಂದಾಣಿಕೆ ಹೊಂದಿರಬೇಕಾಗಿತ್ತು. ಆದರೆ ಅದು ಇಲ್ಲ” ಎಂದು ಹೇಳಿದರು.
ಪಾಯಿಸ್ ಅವರು ಇತರ ಗಲಭೆ ಪ್ರಕರಣಗಳಲ್ಲಿ ನ್ಯಾಯಾಲಯ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿದರು. ಹಲವೆಡೆ ಆರೋಪಿಗಳನ್ನು ಖುಲಾಸೆಗೊಳಿಸಿದ ಸಂದರ್ಭದಲ್ಲಿ ನ್ಯಾಯಾಲಯಗಳು ತನಿಖಾ ಸಂಸ್ಥೆಗಳ ನಿಷ್ಪಕ್ಷಪಾತತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದವು ಎನ್ನುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
“ಮೊದಲು ವ್ಯಕ್ತಿಯನ್ನು ಗುರಿಯಾಗಿಸಿ, ನಂತರ ಸುಳ್ಳು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಆರೋಪಪಟ್ಟಿ ತಯಾರಿಸಲಾಗಿದೆ. ಇದೇ ವಿಧಾನವನ್ನು ಉಮರ್ ಖಾಲಿದ್ ಮೇಲೂ ಅನುಸರಿಸಲಾಗಿದೆ” ಎಂದು ಪಾಯಿಸ್ ವಾದಿಸಿದರು.
ಈ ಪ್ರಕರಣವು 2020ರ ಈಶಾನ್ಯ ದಿಲ್ಲಿ ಗಲಭೆಯ ನಂತರ ವಿಶೇಷ ಘಟಕ ದಾಖಲಿಸಿದ ಎಫ್ಐಆರ್ 59ಕ್ಕೆ ಸಂಬಂಧಿಸಿದೆ. ಗಲಭೆಯಲ್ಲಿ 51 ಜನರು ಮೃತಪಟ್ಟಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು. ಈ ಎಫ್ಐಆರ್ನಲ್ಲಿ ಯುಎಪಿಎ ಅಡಿಯಲ್ಲಿ ಪಿತೂರಿ, ದೇಶದ ಭದ್ರತೆ ಹಾನಿ ಮತ್ತು ಇತರೆ ಗಂಭೀರ ಆರೋಪಗಳನ್ನು ಸೇರಿಸಲಾಗಿದೆ.







