ನ್ಯಾಯಸಮ್ಮತ ಚುನಾವಣೆ ಬಗ್ಗೆ ವಿಶ್ವಸಂಸ್ಥೆ ಪಾಠ ಕಲಿಸಬೇಕಿಲ್ಲ: ವಿದೇಶಾಂಗ ಸಚಿವ ಎಸ್.ಜೈಶಂಕರ್

Photo: PTI
ತಿರುವನಂತಪುರಂ: ಭಾರತದ ಚುನಾವಣೆ ಬಗ್ಗೆ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, ದೇಶದಲ್ಲಿ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ಜಾಗತಿಕ ಸಂಸ್ಥೆ ಹೇಳಬೇಕಾದ ಅಗತ್ಯವಿಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಕ್ತಾರರು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, ಭಾರತದ ಜನತೆಯ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸಲಾಗುತ್ತದೆ ಎಂಬ ನಿರೀಕ್ಷೆಯಿದೆ. ಎಲ್ಲರೂ ಮುಕ್ತ ಹಾಗೂ ನ್ಯಾಯ ಸಮ್ಮತ ವಾತಾವರಣದಲ್ಲಿ ಮತದಾನ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆ ನಮ್ಮದು ಎಂದು ಹೇಳಿದ್ದರು.
ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು, "ವಿಶ್ವಸಂಸ್ಥೆಯ ಪತ್ರಿಕಾಗೋಷ್ಠಿ ವೇಳೆ "ತೀವ್ರ ಒತ್ತಡದ ಪ್ರಶ್ನೆಗಳಿಗೆ" ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆ ಅಧಿಕಾರಿ ಈ ಹೇಳಿಕೆ ನೀಡಿದ್ದರು ಎಂದು ಹೇಳಿದರು.
"ನಮ್ಮ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ವಿಶ್ವಸಂಸ್ಥೆ ಹೇಳಬೇಕಿಲ್ಲ. ಭಾರತದ ಜನತೆ ಇದ್ದಾರೆ. ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವುದನ್ನು ಭಾರತದ ಜನ ಖಾತರಿಪಡಿಸುತ್ತಾರೆ. ಆದ್ದರಿಂದ ಈ ಬಗ್ಗೆ ನೀವು ಚಿಂತಿಸಬೇಕಿಲ್ಲ" ಎಂದು ತಿರುಗೇಟು ನೀಡಿದ್ದಾರೆ.







