ನಿವೃತ್ತರಾಗಲಿರುವ ಅಗ್ನಿವೀರರಿಗೆ ರಾಜ್ಯ ಪೋಲಿಸ್ ಪಡೆಗಳಲ್ಲಿ ಹುದ್ದೆಗಳನ್ನು ಮೀಸಲಿರಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ

ಹೊಸದಿಲ್ಲಿ: ಭವಿಷ್ಯದ ನೇಮಕಾತಿಗಳ ಭಾಗವಾಗಿ ತಮ್ಮ ಪೋಲಿಸ್ ಪಡೆಗಳಲ್ಲಿ ಅಗ್ನಿವೀರರಿಗೆ ಹುದ್ದೆಗಳನ್ನು ಮೀಸಲಿರಿಸುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ವು ರಾಜ್ಯಗಳಿಗೆ ಪತ್ರ ಬರೆದಿದೆ.
ಅಗ್ನಿವೀರರ ಮೊದಲ ತಂಡವು 2026ರಲ್ಲಿ ತನ್ನ ನಾಲ್ಕು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಸಶಸ್ತ್ರ ಪಡೆಗಳಿಂದ ನಿರ್ಗಮಿಸಲು ಸಜ್ಜಾಗಿದೆ.
ಅಧಿಕಾರಿಗಳ ಪ್ರಕಾರ,ಈ ಸಂಬಂಧ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆದಿದ್ದಾರೆ.
ನಿವೃತ್ತರಾಗಲಿರುವ ಶೇ.75ರಷ್ಟು ಅಗ್ನಿವೀರರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಅಗತ್ಯದ ಕುರಿತು ರಾಜ್ಯಗಳಿಗೆ ಮನದಟ್ಟು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಿಲಿಟರಿ ತರಬೇತಿ ಪಡೆದಿರುವ ಅಗ್ನಿವೀರರು ರಾಜ್ಯಮಟ್ಟದ ಕಾನೂನು ಜಾರಿ ಸಂಸ್ಥೆಗಳಲ್ಲಿ ತಮ್ಮ ಪಾತ್ರಗಳಿಗೆ ಹೆಚ್ಚು ಸೂಕ್ತರಾಗಿರುತ್ತಾರೆ ಎಂದು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಅಗ್ನಿಪಥ ಯೋಜನೆಯಡಿ ಪ್ರತಿ ವರ್ಷ ಒಟ್ಟು ನೇಮಕಾತಿಗಳ ಪೈಕಿ ಕೇವಲ ಶೇ.25ರಷ್ಟು ಅಗ್ನಿವೀರರನ್ನು ಸಶಸ್ತ್ರ ಪಡೆಗಳಲ್ಲಿ ಉಳಿಸಿಕೊಳ್ಳಲಾಗುತ್ತದೆ ಮತ್ತು ಉಳಿದವರು ವಿವಿಧ ಉದ್ಯೋಗಗಳನ್ನು ಪಡೆಯಲಿದ್ದಾರೆ.
ಎಂಎಚ್‌ಎ ಈ ಹಿಂದೆ ಘೋಷಿಸಿದ ಯೋಜನೆಯ ಪ್ರಕಾರ ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆಗಳು ತಮ್ಮ ನೇಮಕಾತಿಗಳಲ್ಲಿ ಶೇ.10ರಷ್ಟು ಕೋಟಾವನ್ನು ಅಗ್ನಿವೀರರಿಗೆ ನೀಡುತ್ತವೆ. ರಾಜ್ಯಗಳು ಶೇ.15-20ರಷ್ಟು ಕೋಟಾ ನೀಡಲು ನಿರ್ಧರಿಸಿದರೆ ಸುಮಾರು ಶೇ.50ರಷ್ಟು ಅಗ್ನಿವೀರರನ್ನು ಪೋಲಿಸ್ ಪಡೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.







