ಮಣಿಪುರದ ವೀಡಿಯೋ ಸಂಸತ್ ಅಧಿವೇಶನ ಆರಂಭಗೊಳ್ಳುವ ಮುನ್ನ ಏಕೆ ಹೊರಬಿತ್ತು?: ಅಮಿತ್ ಶಾ ಪ್ರಶ್ನೆ

ಹೊಸದಿಲ್ಲಿ: ಮಣಿಪುರದ ಕಂಗ್ಪೊಕ್ಪಿ ಎಂಬಲ್ಲಿ ಇಬ್ಬರು ಕೂಕಿ ಸಮುದಾಯದ ಮಹಿಳೆಯರ ನಗ್ನ ಮೆರವಣಿಗೆ ನಡೆಸಿದ ಕುರಿತಾದ ವೀಡಿಯೋ ಹೊರಬಿದ್ದ ಸಮಯದ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆಗಳನ್ನೆತ್ತಿದ್ದಾರೆ. ಈ ವೀಡಿಯೋ ಹೊಂದಿದ್ದ ಜನರು ಅವುಗಳ ಕುರಿತು ಸಂಬಂಧಿತ ಇಲಾಖೆಗೆ ಏಕೆ ಮಾಹಿತಿ ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
“ವೀಡಿಯೋ ಏಕೆ ಸಂಸತ್ ಅಧಿವೇಶನಕ್ಕಿಂತ ಮೊದಲು ಬಯಲಾಯಿತು? ಯಾರಾದರೂ ಆ ವೀಡಿಯೋ ಮಾಡಿದ್ದರೆ ಅವರು ಅದನ್ನು ಡಿಜಿಪಿಗೆ ನೀಡಿದ್ದರೆ ಕ್ರಮಕೈಗೊಳ್ಳಬಹುದಾಗಿತ್ತು,” ಎಂದು ಅವರು ಹೇಳಿದರು. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಕೂಡ ಈ ಹಿಂದೆ ಇದೇ ಆರೋಪ ಮಾಡಿದ್ದರಲ್ಲದೆ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಈ ವೀಡಿಯೋ ಬಿಡುಗಡೆಗೊಳಿಸಲಾಗಿತ್ತು ಎಂದಿದ್ದರು.
ಸಂಸತ್ತಿನಲ್ಲಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಶಾ, ಮಣಿಪುರ ಘಟನೆಯನ್ನು ನಾಚಿಕೆಗೇಡು ಎಂದು ಹೇಳಿದರು. “ಈ ರೀತಿಯ ಘಟನೆ ನಾಚಿಕೆಗೇಡು, ಅದೇ ಸಮಯ ಹಿಂಸೆಯನ್ನು ರಾಜಕೀಯಗೊಳಿಸುವುದು ಕೂಡ ನಾಚಿಕೆಗೇಡು,” ಎಂದು ಹೇಳಿದರು.
ಮಣಿಪುರ ಸಿಎಂ ಬದಲಾಯಿಸಬೇಕೆಂಬ ಬೇಡಿಕೆ ಕುರಿತು ಮಾತನಾಡಿದ ಶಾ, “ಒಬ್ಬ ಮುಖ್ಯಮಂತ್ರಿ ಸಹಕಾರ ನೀಡದೇ ಇದ್ದರೆ ಅವರನ್ನು ಬದಲಾಯಿಸಬಹುದು ಆದರೆ ಬಿರೇನ್ ಸಿಂಗ್ ಸಹಕರಿಸುತ್ತಿದ್ದಾರೆ,” ಎಂದು ಹೇಳಿದರು.
ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡಾಗ ಪ್ರಧಾನಿ ಮೋದಿ ತಮಗೆ ಬೆಳಿಗ್ಗೆ 4 ಗಂಟೆಗೆ ಹಾಗೂ ನಂತರ 6.30ಗೆ ಕರೆ ಮಾಡಿದ್ದರು. ಮಣಿಪುರ ಕುರಿತು 16 ವೀಡಿಯೋ ಕಾನ್ಫರೆನ್ಸ್ ಕರೆಗಳನ್ನು ನಡೆಸಲಾಗಿತ್ತು, ಭಾರತೀಯ ವಾಯುಪಡೆ ವಿಮಾನಗಳೊಂದಿಗೆ 36,000 ಕೇಂದ್ರ ಸೇನಾ ಪಡೆಗಳನ್ನು ಕಳುಹಿಸಲಾಗಿತ್ತು, ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಸುರಕ್ಷತಾ ಸಲಹೆಗಾರರನ್ನೂ ಕಳುಹಿಸಲಾಗಿತ್ತು,” ಎಂದು ಅವರು ಹೇಳಿದರು.







