ನಾನು ನಿರ್ಭಯಾಳಂತೆ ಮೃತಪಟ್ಟಿದ್ದರೆ ಎಲ್ಲರೂ ನಂಬುತ್ತಿದ್ದರು: ಉನ್ನಾವೋ ಸಂತ್ರಸ್ತೆ

ಉನ್ನಾವೋ ಸಂತ್ರಸ್ತೆ (Photo credit: NDTV)
ಹೊಸದಿಲ್ಲಿ: ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂತ್ರಸ್ತೆ ನಿರಾಳತೆ ವ್ಯಕ್ತಪಡಿಸಿದ್ದಾರೆ. ತನ್ನ ತಂದೆಯ ಕಸ್ಟಡಿ ಸಾವಿಗೆ ನ್ಯಾಯ ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ.
ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ಸಂತ್ರಸ್ತೆ, ತೀರ್ಪು ಪ್ರಕಟವಾಗುವ ವೇಳೆ ನಾನೇ ನ್ಯಾಯಾಲಯದಲ್ಲಿದ್ದೆ ಎಂದು ತಿಳಿಸಿದರು. “ನಾನು ಇಂದು ಸುಪ್ರೀಂ ಕೋರ್ಟ್ ಗೆ ಹೋಗಿದ್ದೆ. ನ್ಯಾಯಾಧೀಶರು ತೀರ್ಪು ನೀಡಿದಾಗ ನಾನು ನ್ಯಾಯಾಲಯದಲ್ಲಿದ್ದೆ. ಈ ತೀರ್ಪಿನಿಂದ ನನಗೆ ತುಂಬಾ ಸಂತೋಷವಾಗಿದೆ. ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ನ್ಯಾಯಾಧೀಶರು ಆದೇಶಿಸಿರುವುದು ನನಗೆ ತೃಪ್ತಿ ತಂದಿದೆ. ಆದರೆ ನನ್ನ ತಂದೆ ಹಿಂತಿರುಗುವುದಿಲ್ಲ,” ಎಂದು ಅವರು ಹೇಳಿದರು.
ತಂದೆಯ ಸಾವಿಗೆ ಸಂಬಂಧಿಸಿದ ಆರೋಪಿಗಳನ್ನು ಇನ್ನೂ ಕಾನೂನು ಕ್ರಮಕ್ಕೆ ಒಳಪಡಿಸದಿರುವುದು ಅನ್ಯಾಯ ಎಂದು ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದರು. “ಅತುಲ್ ಸಿಂಗ್ ಸೆಂಗಾರ್ ಮತ್ತು ಜೈದೀಪ್ ಸಿಂಗ್ ಸೆಂಗಾರ್ ನನ್ನ ತಂದೆಯನ್ನು ಕೊಲೆ ಮಾಡಿದರು. ಅವರು ವೈದ್ಯಕೀಯ ಚಿಕಿತ್ಸೆಗಾಗಿ ಜೈಲಿನಿಂದ ಹೊರಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳೂ ಹೊರಗಿದ್ದಾರೆ. ಕುಲದೀಪ್ ಸಿಂಗ್ ಸೆಂಗಾರ್ ನನ್ನ ಮೇಲೆ ಘೋರ ಕೃತ್ಯ ಎಸಗಿದ್ದಾರೆ. ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಾನು ಅದನ್ನು ಹೇಗೆ ಸಾಬೀತುಪಡಿಸಲಿ? ನಾನು ಜೀವಂತವಾಗಿರುವುದೇ ನನ್ನ ತಪ್ಪೇ?” ಎಂದು ಅವರು ಪ್ರಶ್ನಿಸಿದರು.
ಎಂಟು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವುದಾಗಿ ಹೇಳಿದ ಸಂತ್ರಸ್ತೆ, “ನಾನು ನಿರ್ಭಯಾಳಂತೆ ಸತ್ತಿದ್ದರೆ ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಎಲ್ಲರೂ ನಂಬುತ್ತಿದ್ದರು. ನಾನು ಜೀವಂತವಾಗಿದ್ದೇನೆ. ನನಗೆ ಏನಾಯಿತು ಎಂಬುದನ್ನು ಸಾಬೀತುಪಡಿಸಲು ವರ್ಷಗಳೇ ಬೇಕಾಯಿತು. ಈಗಲೂ ಸಹ ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಸಾಬೀತುಪಡಿಸಬೇಕಾಗಿದೆ. ನನ್ನ ತಂದೆಗೆ ನ್ಯಾಯ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ಗೆ ವಿನಂತಿಸಿದ್ದೇನೆ. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಸಂತ್ರಸ್ತೆ ಹೇಳಿದರು.
ಇದಕ್ಕೂ ಮೊದಲು ಶಿಕ್ಷೆ ಅಮಾನತು ಹಾಗೂ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಮೇಲ್ಮನವಿಯನ್ನು ಮೂರು ತಿಂಗಳೊಳಗೆ ವಿಚಾರಣೆ ಮಾಡಿ ತೀರ್ಮಾನಿಸಲು ದಿಲ್ಲಿ ಹೈಕೋರ್ಟ್ ಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, “ಮೇಲ್ಮನವಿಯನ್ನು ಆಲಿಸಿ ತೀರ್ಮಾನಿಸಲು ಹೈಕೋರ್ಟ್ ಗೆ ಸೂಚಿಸುವುದು ಸೂಕ್ತ” ಎಂದು ಅಭಿಪ್ರಾಯಪಟ್ಟಿತು. ಶಿಕ್ಷೆ ವಿಧಿಸಲಾದ ಪ್ರಕರಣಗಳಲ್ಲಿ ಮೇಲ್ಮನವಿಯನ್ನು ಶೀಘ್ರವಾಗಿ ಆಲಿಸುವುದು ಸಾಮಾನ್ಯ ನಿಯಮವಾಗಿದ್ದು, ಸಂತ್ರಸ್ತೆಯ ಹಕ್ಕುಗಳನ್ನು ಕುಂಠಿತಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸೆಂಗಾರ್ ಪರ ವಕೀಲರು ಈಗಾಗಲೇ ಏಳು ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಜಾಮೀನು ನೀಡಬೇಕು ಎಂದು ವಾದಿಸಿದರೆ, ಸಿಬಿಐ ಪರ ವಕೀಲರು ಅವರು ಪ್ರತ್ಯೇಕ ಅತ್ಯಾಚಾರ ಪ್ರಕರಣದಲ್ಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವುದನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದರು. ಗಂಭೀರ ಅಪರಾಧ ಹಿನ್ನೆಲೆ ಇರುವ ಪ್ರಕರಣಗಳಲ್ಲಿ ಜಾಮೀನು ನೀಡುವಲ್ಲಿ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕೆಂದು ಪೀಠವು ಸ್ಪಷ್ಟಪಡಿಸಿದೆ.







