ಉತ್ತರ ಪ್ರದೇಶ | ಕಾಲೇಜು ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆ: ಸಂತ್ರಸ್ತೆಯ ಕುಟುಂಬಸ್ಥರಿಂದ ಪ್ರತಿಭಟನೆ
ಆರೋಪಿಯನ್ನು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Photo | NDTV
ವಾರಣಾಸಿ : ವಾರಣಾಸಿಯಲ್ಲಿ ವಿವಾಹವಾಗುವಂತೆ ಒತ್ತಡ ಮತ್ತು ಪದೇ ಪದೇ ಹಣಕ್ಕಾಗಿ ಬೇಡಿಕೆ ಇಟ್ಟ ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಅಲ್ಕಾ ಬಿಂದ್ ಕೊಲೆಯಾದ ವಿದ್ಯಾರ್ಥಿನಿ. ಮಿರ್ಝಾಮುರಾದ್ ಪ್ರದೇಶದ ರೂಪಾಪುರದ ವಿಧಾನ್ ಬಸೇರಾ ಧಾಬಾದ ಕೊಠಡಿಯಲ್ಲಿ ಅಲ್ಕಾ ಬಿಂದ್ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಹಾಬ್ ಬಿಂದ್ ಕೃತ್ಯವನ್ನು ಎಸಗಿದ ಆರೋಪಿ. ಭದೋಹಿಯಲ್ಲಿರುವ ಸಹೋದರಿಯ ಮನೆಯಿಂದ ಈತನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಈತ ಪೊಲೀಸರಿಂದ ಬಂದೂಕು ಕಸಿದುಕೊಂಡು ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಾಲಿಗೆ ಗುಂಡಿಕ್ಕಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾರಣಾಸಿ ಡಿಸಿಪಿ ಆಕಾಶ್ ಪಟೇಲ್ ಈ ಕುರಿತು ಪ್ರತಿಕ್ರಿಯಿಸಿ, ʼಬುಧವಾರ ಬೆಳಿಗ್ಗೆ 9.30ರ ಸುಮಾರಿಗೆ ಕಾಲೇಜಿಗೆಂದು ಅಲ್ಕಾ ತನ್ನ ಮನೆಯಿಂದ ತೆರಳಿದ್ದಳು. ಆದರೆ ತಡರಾತ್ರಿಯವರೆಗೂ ಮನೆಗೆ ಹಿಂತಿರುಗಲಿಲ್ಲ. ಇದರಿಂದಾಗಿ ಯುವತಿಯ ಕುಟುಂಬ ನಾಪತ್ತೆ ಬಗ್ಗೆ ದೂರು ದಾಖಲಿಸಿತ್ತು. ಮರುದಿನ ಧಾಬಾವೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ಯುವತಿಯ ಫೋನ್ ಕರೆ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಮದುವೆ ಮತ್ತು ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟಿದ್ದರಿಂದ ಅಲ್ಕಾಳನ್ನು ಕೊಲೆ ಮಾಡಿರುವುದಾಗಿ ಸಾಹಬ್ ಬಿಂದ್ ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಸಹಾಬ್ ಬಿಂದ್ ಧಾಬಾದ ಕೊಠಡಿಗೆ ಅಲ್ಕಾಳನ್ನು ಕರೆಸಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಧಾಬಾದ ಉದ್ಯೋಗಿಯೋರ್ವರು ಸ್ವಚ್ಛಗೊಳಿಸಲು ಕೊಠಡಿಗೆ ಪ್ರವೇಶಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿ ಸಂತ್ರಸ್ತೆಯ ಕುಟುಂಬ ಪ್ರತಿಭಟನೆ ನಡೆಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇದು ದುಃಖಕರ ಘಟನೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.







