ಉದ್ಯಮಿಗಳು, ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ತನಿಖೆಯನ್ನು ಕಡ್ಡಾಯಗೊಳಿಸಿದ ಉತ್ತರ ಪ್ರದೇಶ ಸರ್ಕಾರ

ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (PTI)
ಹೊಸದಿಲ್ಲಿ: ಉತ್ತರ ಪ್ರದೇಶ ಸರ್ಕಾರವು ಉದ್ಯಮಿಗಳ ವಿರುದ್ಧ ಆಧಾರರಹಿತ ಪ್ರಕರಣಗಳು ದಾಖಲಾಗುವುದನ್ನು ತಗ್ಗಿಸುವ ಭಾಗವಾಗಿ, ಅವರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾಗುವುದಕ್ಕೂ ಮುನ್ನ ಪ್ರಾಥಮಿಕ ತನಿಖೆ ನಡೆಸುವುದನ್ನು ಕಡ್ಡಾಯಗೊಳಿಸಿ ಶನಿವಾರ ಆದೇಶಿಸಿದೆ ಎಂದು The Hindu ಪತ್ರಿಕೆ ವರದಿ ಮಾಡಿದೆ.
“ವ್ಯಾಪಾರಿಗಳು ಹಾಗೂ ಉದ್ಯಮಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆಯನ್ನು ಕಡ್ಡಾಯಗೊಳಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಆದೇಶಿಸಿದ್ದಾರೆ. ಪದೇ ಪದೇ ಕಿರುಕುಳ ಹಾಗೂ ಅನಪೇಕ್ಷಿತ ಒತ್ತಡಕ್ಕೆ ಕಾರಣವಾಗುತ್ತಿರುವ ಉದ್ಯಮಿಗಳು ಹಾಗೂ ವ್ಯಾಪಾರಿಗಳ ವಿರುದ್ಧದ ಆಧಾರರಹಿತ ಪ್ರಾಥಮಿಕ ಮಾಹಿತಿ ವರದಿಗಳ ಪ್ರಮಾಣಗಳನ್ನು ತಗ್ಗಿಸುವ ನಡೆ ಇದಾಗಿದೆ. ಇನ್ನು ಮುಂದೆ ಯಾವ ವ್ಯಕ್ತಿಯೂ ವ್ಯಾಪಾರಿಗಳು ಹಾಗೂ ಉದ್ಯಮಿಗಳ ವಿರುದ್ಧ ನೇರವಾಗಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಲು ಸಾಧ್ಯವಿಲ್ಲ” ಎಂದು ಉತ್ತರ ಪ್ರದೇಶ ಸರ್ಕಾರದ ಪ್ರಕಟಣೆಯಲ್ಲಿ ಹೇಳಲಾಗಿದೆ.
ವರದಿಯ ಪ್ರಕಾರ, ರಾಜ್ಯದ ಅಭಿವೃದ್ಧಿಗೆ ಯಾವುದೇ ರೀತಿಯ ತೊಡಕಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಂಜ್ಞೇಯ ಅಪರಾಧಗಳಲ್ಲಿ ಪೊಲೀಸರು ಯಾವುದೇ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸಲು ಈ ಆದೇಶವು ಅಡ್ಡಿಯಾಗುವುದಿಲ್ಲ.
“ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ವ್ಯಾಪಾರೋದ್ಯಮಗಳ ಸುಗಮ ಚಟುವಟಿಕೆಗಳಿಗೆ ಯಾವುದೇ ತೊಡಕುಂಟಾಗದಂತೆ ಖಾತ್ರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಇದೇ ವೇಳೆ, ಉದ್ಯಮಿಗಳು, ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳ ಮಾಲಕರು, ಆಸ್ಪತ್ರೆಗಳು, ನಿರ್ಮಾಣ ಕಂಪನಿಗಳು, ಹೋಟೆಲ್ ಗಳು ಹಾಗೂ ಇನ್ನಿತರರಿಗೆ ಯಾವುದೇ ಬಗೆಯ ಕಿರುಕುಳವಾಗುವುದನ್ನು ತಡೆಯಲು ಸರ್ಕಾರ ದೃಢ ನಿರ್ಧಾರ ಮಾಡಿದೆ” ಎಂದೂ ಆದೇಶದಲ್ಲಿ ಹೇಳಲಾಗಿದೆ. ಸರ್ಕಾರದ ಇಂತಹ ಉಪಕ್ರಮಗಳಿಂದಾಗಿ ರಾಜ್ಯದಲ್ಲಿ ರೂ. 36 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ.







