ನಾಳೆಯಿಂದ UPI ನಿಯಮಾವಳಿಗಳಲ್ಲಿ ಭಾರಿ ಬದಲಾವಣೆ!
ಗ್ರಾಹಕರು ತಮ್ಮ ಗುರುತಿನಿಂದ ಈ ಚಿಹ್ನೆಗಳನ್ನು ತೆಗೆಯಬೇಕು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಫೆಬ್ರವರಿ 1, 2025ರಿಂದ ಅನ್ವಯವಾಗುವಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಪರಿಷ್ಕೃತ ನಿಯಮಾವಳಿಗಳ ಪ್ರಕಾರ, #, @, $ ಅಥವಾ * ವಿಶೇಷ ಚಿಹ್ನೆಗಳನ್ನು ಹೊಂದಿರುವ ಯುಪಿಐ ಗುರುತುಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.
ಆ ಮೂಲಕ, ಹೊಸ ನಿಯಮಾವಳಿಯಂತೆ ಎಲ್ಲ ಡಿಜಿಟಲ್ ಪಾವತಿ ಗ್ರಾಹಕರು ತಮ್ಮ ಬಳಕೆಯ ಗುರುತನ್ನು ಬದಲಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಗದಿಗೆ ಬದಲಿಯಾಗಿ ಬೆಳಕಿಗೆ ಬಂದಿರುವ ಯುಪಿಐ ಪಾವತಿ ವ್ಯವಸ್ಥೆ ಭಾರಿ ಜನಪ್ರಿಯತೆ ಗಳಿಸಿದೆ. ಜನರು ಈ ಪಾವತಿ ವ್ಯವಸ್ಥೆಯನ್ನು ದಿನಸಿ ಖರೀದಿಯಿಂದ ಹಿಡಿದು ಮುಂಗಡ ಕಾಯ್ದಿರಿಸುವಿಕೆವರೆಗೂ ಬಳಸುತ್ತಿದ್ದಾರೆ.
ಡಿಸೆಂಬರ್ 2024ರ ವೇಳೆಗೆ ಯುಪಿಐ ವಹಿವಾಟಿನ ಸಂಖ್ಯೆ 16.73 ಶತಕೋಟಿ ತಲುಪಿದೆ. ಇದು ಕಳೆದ ತಿಂಗಳುಗಳಿಗೆ ಹೋಲಿಸಿದರೆ ಶೇ. 8ರಷ್ಟು ಅಧಿಕವಾಗಿದೆ. ನಗದು ವಹಿವಾಟು ಈಗಲೂ ಅಸ್ತಿತ್ವದಲ್ಲಿದ್ದರೂ, ಡಿಜಿಟಲ್ ಪಾವತಿಗಳು ಭಾರಿ ಜನಪ್ರಿಯತೆ ಗಳಿಸಿವೆ.
ಭಾರತದ ಮೊದಲ ದರ್ಜೆಯ ನಗರಗಳು ಯುಪಿಐ ವಹಿವಾಟಿನಲ್ಲಿ ಮುಂಚೂಣಿಯಲ್ಲಿವೆ. ಹೀಗಿದ್ದೂ, ಈ ವ್ಯವಸ್ಥೆಯ ಅಳವಡಿಕೆಯಿಂದ, ಯುಪಿಐ ಸಂಬಂಧಿತ ಹಗರಣಗಳು ಹಾಗೂ ವಂಚನೆಗಳ ಪ್ರಮಾಣವೂ ಹೆಚ್ಚಳಗೊಂಡಿದೆ. ಇದರಿಂದ ಬಳಕೆದಾರರ ಬ್ಯಾಂಕ್ ಖಾತೆಗಳ ಮೇಲೆ ದುಷ್ಪರಿಣಾಮವುಂಟಾಗಿದೆ. ಯುಪಿಐ ವಹಿವಾಟಿನ ಭದ್ರತೆಯನ್ನು ಹೆಚ್ಚಿಸಲು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಈ ಹೊಸ ನಿಯಮಾವಳಿಯನ್ನು ಪರಿಚಯಿಸಿದ್ದು, ಈ ನಿಯಮಾವಳಿಯು ಎಲ್ಲ ಯುಪಿಐ ಬಳಕೆದಾರರಿಗೂ ಕಡ್ಡಾಯವಾಗಿದೆ.
ನೀವು ಯುಪಿಐ ವಹಿವಾಟನ್ನು ಅವಲಂಬಿಸಬೇಕಿದ್ದರೆ, ಈ ಮಾಹಿತಿಯು ನಿಮಗೆ ತುಂಬಾ ಮುಖ್ಯವಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಸುತ್ತೋಲೆಯ ಪ್ರಕಾರ, ಇನ್ನು ಮುಂದೆ ಯುಪಿಐ ಗುರುತುಗಳು ವಿಶೇಷ ಚಿಹ್ನೆಗಳನ್ನು ಹೊಂದಿರುವಂತಿಲ್ಲ. ಫೆಬ್ರವರಿ 1ರಿಂದ ಯುಪಿಐ ಗುರುತುಗಳಿಗೆ ಕೇವಲ 0-9 ಅಂಕಿ ಹಾಗೂ A-Z ಅಕ್ಷರಗಳನ್ನು ಬಳಸಲು ಮಾತ್ರ ಅವಕಾಶವಿರುತ್ತದೆ.
ಬಹುತೇಕ ಬಳಕೆದಾರರು ತಮ್ಮ ಯುಪಿಐ ಗುರುತಿನಲ್ಲಿ ವಿಶೇಷ ಚಿಹ್ನೆಗಳನ್ನು ಹೊಂದಿದ್ದು, ಅವರು ಯುಪಿಐ ಬಳಸುವುದನ್ನು ಮುಂದುವರಿಸಬೇಕಿದ್ದರೆ, ಅವರು ತಕ್ಷಣವೇ ತಮ್ಮ ಯುಪಿಐ ಗುರುತನ್ನು ಬದಲಿಸಿಕೊಳ್ಳಬೇಕಿದೆ. ಈ ಕ್ರಮವು ಡಿಜಿಟಲ್ ಭದ್ರತೆಯನ್ನು ಸುಧಾರಿಸುವ ಗುರಿ ಹೊಂದಿದ್ದು, ಯುಪಿಐ ವ್ಯವಸ್ಥೆಯು ಸೀಮಾತೀತವಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಗೊಳಿಸುವ ಗುರಿಯನ್ನೂ ಹೊಂದಿದೆ.
ಈ ಸಂಬಂಧ ಜನವರಿ 9ರಂದು ಸುತ್ತೋಲೆಯನ್ನು ಹೊರಡಿಸಿದ್ದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು, ಈ ನಿಯಮಾವಳಿಗಳ ಪಾಲನೆಯನ್ನು ಕಡ್ಡಾಯಗೊಳಿಸಿತ್ತು. ಇದರರ್ಥ, ನಿಮ್ಮ ಯುಪಿಐ ಗುರುತೇನಾದರೂ ವಿಶೇಷ ಚಿಹ್ನೆಗಳನ್ನು ಹೊಂದಿದ್ದರೆ, ನೀವು ಫೆಬ್ರವರಿ 1ರಿಂದ ಪಾವತಿಗಳನ್ನು ಮಾಡಲು ಸಾಧ್ಯವಿಲ್ಲ ಹಾಗೂ ನಿಮ್ಮ ವಹಿವಾಟುಗಳು ಸ್ವಯಂಚಾಲಿತವಾಗಿ ವಿಫಲಗೊಳ್ಳಲಿವೆ.
ಬಹುತೇಕ ಬ್ಯಾಂಕ್ ಗಳು ಹಾಗೂ ಪಾವತಿ ವೇದಿಕೆಗಳು ಈ ಬದಲಾವಣೆಯನ್ನು ಜಾರಿಗೊಳಿಸಿದ್ದರೂ, ಯಾರು ತಮ್ಮ ಗುರುತನ್ನು ಬದಲಿಸಿಲ್ಲವೊ ಅವರು ಗಡುವಿಗೂ ಮುನ್ನ ತಮ್ಮ ಗುರುತನ್ನು ಬದಲಾಯಿಸಿಕೊಳ್ಳಬೇಕಿದೆ.







