ಉರ್ದು ಅತ್ಯಂತ ಸುಂದರ ಭಾಷೆ: ಕೇಂದ್ರ ಸಚಿವ ಕಿರಣ್ ರಿಜಿಜು

Photo: PTI
ಹೊಸದಿಲ್ಲಿ: "ಉರ್ದು ವಿಶ್ವದ ಅತ್ಯಂತ ಸುಂದರ ಭಾಷೆ" ಎಂದು ಬಣ್ಣಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ದೇಶದ ಪ್ರಗತಿ ಮತ್ತು ಏಕತೆಗೆ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಾಮರಸ್ಯ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾದ 105 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವ ಮನೋಭಾವವನ್ನು ಪ್ರತಿಬಿಂಬಿಸುವ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದರು.
"ವಿಶ್ವವಿದ್ಯಾಲಯದ ಧ್ಯೇಯ ಗೀತೆ ನಮ್ಮ ರಾಷ್ಟ್ರದ ಮೌಲ್ಯಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ಮಹಾತ್ಮಾ ಗಾಂಧಿ ಮತ್ತು ಸರೋಜಿನಿ ನಾಯ್ಡು ಅವರಂತಹ ಮಹಾನ್ ದಿಗ್ಗಜರು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಾಗ ಬೆಂಬಲಿಸಿದರು ಎಂದು ನಾನು ನಿಮಗೆ ನೆನಪಿಸಲು ಬಯಸುತ್ತೇನೆ" ಎಂದು ಸಚಿವರು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನವನ್ನು ಶ್ಲಾಘಿಸಿದ ರಿಜಿಜು, ಅದರ ಶೈಕ್ಷಣಿಕ ದಾಖಲೆ ಮತ್ತು ರಾಷ್ಟ್ರೀಯ ಶ್ರೇಯಾಂಕದಿಂದ ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಮುಕ್ತ ಚರ್ಚೆಯ ಮಹತ್ವವನ್ನು ಒತ್ತಿ ಹೇಳಿದ ಅವರು, "ನಮ್ಮ ಪ್ರಜಾಪ್ರಭುತ್ವದಲ್ಲಿ, ಜನರು ತಮ್ಮ ಅಭಿಪ್ರಾಯಗಳನ್ನು ಆಕ್ರಮಣಕಾರಿಯಾಗಿ ವ್ಯಕ್ತಪಡಿಸುತ್ತಾರೆ, ಇದು ಕೆಲವೊಮ್ಮೆ ಧ್ರುವೀಕರಣವನ್ನು ಸೃಷ್ಟಿಸುತ್ತದೆ. ಆದರೆ ಅದು ದೇಶಕ್ಕೆ ಹಾನಿ ಮಾಡದಿರುವವರೆಗೆ ಅದು ಕೆಟ್ಟದ್ದಲ್ಲ" ಎಂದು ಹೇಳಿದರು.
ಸಂಸತ್ತು ಆಗಾಗ್ಗೆ ಗದ್ದಲದ ಚರ್ಚೆಗಳಿಗೆ ಸಾಕ್ಷಿಯಾಗಿದ್ದರೂ, ವೈವಿಧ್ಯಮಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇದು ಅತ್ಯುತ್ತಮ ವೇದಿಕೆಯಾಗಿ ಉಳಿದಿದೆ ಎಂದು ರಿಜಿಜು ಉಲ್ಲೇಖಿಸಿದರು.
"ಸಂಸದೀಯ ವ್ಯವಹಾರಗಳ ಸಚಿವನಾಗಿ, ಸದನವನ್ನು ನಡೆಸುವುದು ಕೆಲವೊಮ್ಮೆ ಕಠಿಣವಾಗಿರುತ್ತದೆ; ಆದರೆ ಸಂಸತ್ತಿನಲ್ಲಿನ ಅವ್ಯವಸ್ಥೆಯು ರೋಮಾಂಚಕ ಪ್ರಜಾಪ್ರಭುತ್ವದ ಸಂಕೇತವಾಗಿದೆ" ಎಂದು ಅವರು ಹೇಳಿದರು. ಅಡ್ಡಿ ಆತಂಕಗಳ ಹೊರತಾಗಿಯೂ, ನಿರ್ಣಾಯಕ ಶಾಸನವನ್ನು ಅಂತಿಮವಾಗಿ ರಾಷ್ಟ್ರದ ಹಿತಾಸಕ್ತಿಗಾಗಿ ಅಂಗೀಕರಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಭಾರತದ ಸಾಂವಿಧಾನಿಕ ಶಕ್ತಿ ಮತ್ತು ವೈವಿಧ್ಯತೆಯ ಕುರಿತು ಮಾತನಾಡಿದ ಸಂಸದೀಯ ಸಚಿವ ರಿಜಿಜು, "ಸಂವಿಧಾನದಿಂದಾಗಿಯೇ ನಾವು ಸುರಕ್ಷಿತವಾಗದ್ದೇವೆ. ಏಕೆಂದರೆ ಅದು ಸಮಸ್ಯೆಯ ಪ್ರತಿಯೊಂದು ಅಂಶವನ್ನು ಒಳಗೊಂಡಿದೆ ಮತ್ತು ಅದಕ್ಕೆ ಪರಿಹಾರವನ್ನು ಒದಗಿಸುತ್ತದೆ" ಎಂದು ಹೇಳಿದರು.
ಮಾನ್ಯತೆ ಪಡೆದ ಆರು ಅಲ್ಪಸಂಖ್ಯಾತರಲ್ಲಿ, ಮುಸ್ಲಿಮರು ಸುಮಾರು ಶೇ. 80 ರಷ್ಟಿದ್ದಾರೆ. ದೊಡ್ಡ ಸಮುದಾಯಗಳಾದ ಹಿಂದೂಗಳು ಮತ್ತು ಮುಸ್ಲಿಮರು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಅವರು ಶಾಂತಿಯಿಂದ ಬದುಕಿದರೆ, ಇತರ ಎಲ್ಲಾ ಸಣ್ಣ ಸಮುದಾಯಗಳೂ ದೇಶದ ಬೆಳವಣಿಗೆಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತವೆ. ಅಂತಹ ಸಂದೇಶ ಕೊಡುವುದಕ್ಕೆ ಅತ್ಯುತ್ತಮ ಸಂಕೇತ ಜಾಮಿಯಾ ಮಿಲಿಯಾ ಇಸ್ಲಾಮಿಯಾ," ಎಂದು ಸಚಿವ ಕಿರಣ್ ರಿಜಿಜು ಹೇಳಿದರು.







