ಮಧ್ಯಪ್ರದೇಶದಲ್ಲಿ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿ ಬಿಜೆಪಿ ನಾಯಕನೆನ್ನಲಾದ ವ್ಯಕ್ತಿಯ ಬಂಧನ

ಫೋಟೋ Twitter@NDTV
ಭೋಪಾಲ್: ಆದಿವಾಸಿ ಯುವಕನ ಮುಖದ ಮೇಲೆ ಮಧ್ಯಪ್ರದೇಶ ಬಿಜೆಪಿ ನಾಯಕನೆನ್ನಲಾದ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ ಮೂತ್ರ ವಿಸರ್ಜಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶುಕ್ಲಾನನ್ನು ಮಂಗಳವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆರೋಪಿ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ವೈರಲ್ ವೀಡಿಯೋದಲ್ಲಿ ಪ್ರವೇಶ್ ಶುಕ್ಲಾ ಎಂದು ಗುರುತಿಸಲಾದ ವ್ಯಕ್ತಿ, ನೆಲದ ಮೇಲೆ ಕುಳಿತಿರುವ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವಾಗ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆರೋಪಿ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.
ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಆರು ದಿನಗಳ ಹಿಂದೆ ಜರುಗಿದ್ದ ಈ ಘಟನೆಯ ವೀಡಿಯೊವನ್ನು ಪೊಲೀಸರು ಮಂಗಳವಾರವಷ್ಟೇ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಂಧನದಿಂದ ತಪ್ಪಿಸಿಕೊಳ್ಳಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದ ಪ್ರವೇಶ್ ಶುಕ್ಲಾನನ್ನು ಮಧ್ಯರಾತ್ರಿ ವಶಕ್ಕೆ ಪಡೆಯಲಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ಲಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ವರ್ತನೆ) ಹಾಗೂ ಸೆಕ್ಷನ್ 504 (ಶಾಂತಿಭಂಗಗೊಳಿಸಲು ಉದ್ದೇಶಪೂರ್ವಕ ಅವಮಾನ) ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ.
ವೈರಲ್ ವೀಡಿಯೊ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’’ ಎಂದು ಹೇಳಿದ್ದಾರೆ.
ಸರಕಾರವು ಆರೋಪಿ ಶುಕ್ಲಾಗೆ ಸಾಧ್ಯವಿರುವಷ್ಟೂ ಕಠಿಣ ಶಿಕ್ಷೆ ನೀಡಲಿದ್ದು, ಅದು ಬೇರೊಬ್ಬರಿಗೆ ಉದಾಹರಣೆಯಾಗುವಂತಿರಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
"ನಾವು ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ಪಾರಾಗಲು ಬಿಡುವುದಿಲ್ಲ" ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೆಲವು ವಲಯಗಳಿಂದ ಕೇಳಿ ಬರುತ್ತಿರುವಂತೆ ಆರೋಪಿಯು ಬಿಜೆಪಿಯ ಸದಸ್ಯನೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿರುವ ಚೌಹಾಣ್, "ಅಪರಾಧಿಗಳಿಗೆ ಯಾವುದೇ ಜಾತಿ, ಧರ್ಮ ಹಾಗೂ ಪಕ್ಷವಿರುವುದಿಲ್ಲ. ಆತನನ್ನು ಪಾರಾಗಲು ಬಿಡುವುದಿಲ್ಲ" ಎಂದಿದ್ದಾರೆ.
ಇಂಥದೇ ಮಾತುಗಳನ್ನು ಪ್ರತಿಧ್ವನಿಸಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, "ಯಾವುದೇ ಪಕ್ಷಕ್ಕೆ ಸೇರಿದ್ದರೂ, ಯಾರೇ ತಪ್ಪು ಮಾಡಿದ್ದರೂ ಅಂತಹವರನ್ನು ಶಿಕ್ಷಿಸಲಾಗುವುದು" ಎಂದು ಹೇಳಿದ್ದಾರೆ.
ಸದರಿ ವೀಡಿಯೊ ವೈರಲ್ ಆಗುತ್ತಿದ್ದಂತೆಯೆ ಫೇಸ್ಬುಕ್ನಲ್ಲಿ ಬಿಜೆಪಿ ಶಾಸಕ ಕೇದಾರ್ನಾಥ್ ಜೊತೆಗಿರುವ ತನ್ನ ಚಿತ್ರವನ್ನು ಹಂಚಿಕೊಂಡಿದ್ದ ಶುಕ್ಲಾನ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿರುವ ವಿರೋಧ ಪಕ್ಷಗಳು, ಪ್ರವೇಶ್ ಶುಕ್ಲಾ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ಆರೋಪಿಸಿವೆ. ಆದರೆ, ಶುಕ್ಲಾನೊಂದಿಗೆ ತನಗೆ ಸಂಬಂಧವಿದೆ ಎಂಬ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.
ಹೀಗಿದ್ದೂ, ಪ್ರವೇಶ್ ಶುಕ್ಲಾನ ತಂದೆ ರಮಾಕಾಂತ್ ಶುಕ್ಲಾ, "ನನ್ನ ಪುತ್ರ ಕೇದಾರ್ ಶುಕ್ಲಾರ ಪ್ರತಿನಿಧಿಯಾಗಿದ್ದಾನೆ. ಆತ ಬಿಜೆಪಿ ಶಾಸಕರ ಪ್ರತಿನಿಧಿಯಾಗಿರುವುದರಿಂದಲೇ ವಿರೋಧ ಪಕ್ಷಗಳು ಆತನನ್ನು ಗುರಿಯಾಗಿಸಿಕೊಂಡಿವೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆದು, ನ್ಯಾಯ ದೊರೆಯುವಂತಾಗಲಿ ಎಂದು ನಾನು ಆಶಿಸುತ್ತೇನೆ" ಎಂದು ಹೇಳಿದ್ದಾರೆ.







