ವಿದ್ಯಾರ್ಥಿಗಳು, ಪತ್ರಕರ್ತರ ವಾಸ್ತವ್ಯ ಅವಧಿಗಳನ್ನು ನಿರ್ಬಂಧಿಸಿದ್ದ ವೀಸಾ ನಿಯಮಗಳನ್ನು ರದ್ದುಗೊಳಿಸಿದ ಅಮೆರಿಕ ನ್ಯಾಯಾಲಯ

ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ: ಅಮೆರಿಕದಲ್ಲಿ ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ವಾಸ್ತವ್ಯದ ಅವಧಿಗಳ ಮೇಲೆ ಕಠಿಣ ವೀಸಾ ಮಿತಿಗಳನ್ನು ಹೇರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ಬೋಸ್ಟನ್ನ ಫೆಡರಲ್ ನ್ಯಾಯಾಧೀಶರು ಸೋಮವಾರ ರದ್ದುಗೊಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ವಿಶ್ವವಿದ್ಯಾಲಯಗಳು, ಶಿಕ್ಷಕರು ಮತ್ತು ಪತ್ರಕರ್ತರನ್ನು ಪ್ರತಿನಿಧಿಸುವ ಯೂನಿಯನ್ಗಳ ಒಕ್ಕೂಟವು ಆಂತರಿಕ ಭದ್ರತಾ ಇಲಾಖೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ.
ಜುಲೈ ತಿಂಗಳಲ್ಲಿ ಘೋಷಿಸಲಾದ ಹೊಸ ನಿಯಮಗಳು, ‘ಎಫ್’ ವೀಸಾ ಹೊಂದಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, ‘ಜೆ’ ವೀಸಾ ಹೊಂದಿರುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಸಂದರ್ಶಕರು ಮತ್ತು ‘ಐ’ ವೀಸಾ ಹೊಂದಿರುವ ವಿದೇಶಿ ಪತ್ರಕರ್ತರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿತ್ತು.
ಪ್ರಸ್ತಾವಿತ ಹೊಸ ನಿಯಮಗಳ ಪ್ರಕಾರ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಗರಿಷ್ಠ ನಾಲ್ಕು ವರ್ಷಗಳವರೆಗೆ ಮಾತ್ರ ಇರಲು ಅವಕಾಶವಿರುತ್ತದೆ ಮತ್ತು ಅದರ ನಂತರ ಅವರು ವಿಸ್ತರಣೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹಿಂದೆ ವಿದ್ಯಾರ್ಥಿ ವೀಸಾ ಹೊಂದಿರುವ ವಿದೇಶಿಯರು ತಮ್ಮ ಇಡೀ ಅಧ್ಯಯನದ ಅವಧಿಗೆ ಅಮೆರಿಕದಲ್ಲಿ ನೆಲೆಸಲು ಅವಕಾಶವಿತ್ತು.
ಪ್ರಸ್ತಾವಿತ ಹೊಸ ನಿಯಮವು ವಿದೇಶಿ ಪತ್ರಕರ್ತರು ದೇಶದಲ್ಲಿ ತಂಗುವ ಅವಧಿಯನ್ನು ಐದು ವರ್ಷಗಳಿಂದ 240 ದಿನಗಳಿಗೆ ಮತ್ತು ಚೀನೀ ಪತ್ರಕರ್ತರ ಸಂದರ್ಭದಲ್ಲಿ 90 ದಿನಗಳಿಗೆ ತಗ್ಗಿಸಲು ಉದ್ದೇಶಿಸಿತ್ತು.
ಅಲ್ಲದೆ, ಅಧ್ಯಯನ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಗ್ರೇಸ್ ಅವಧಿಯನ್ನು 60 ದಿನಗಳಿಂದ 30 ದಿನಗಳಿಗೆ ಇಳಿಸಲು ಪ್ರಸ್ತಾವಿಸಲಾಗಿತ್ತು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ದೇಶ ತೊರೆಯಬೇಕು, ಮತ್ತೊಂದು ಸಂಸ್ಥೆಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಅಮೆರಿಕದಲ್ಲೇ ಉಳಿಯಲು ಬಯಸಿದರೆ ಬೇರೆ ವೀಸಾ ಸ್ಥಿತಿಗೆ ಬದಲಾಯಿಸಿಕೊಳ್ಳಬೇಕು.
ಟ್ರಂಪ್ ನೀತಿಯನ್ನು ರದ್ದುಗೊಳಿಸಿದ ವೇಳೆ ನ್ಯಾಯಾಧೀಶ ಡೆನ್ನಿಸ್ ಸೇಲರ್ ಅವರು, ಈ ನೀತಿಯು ನಿರಂಕುಶವಾಗಿದೆ, ವಿವೇಚನಾರಹಿತವಾಗಿದೆ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಕಟುವಾಗಿ ಟೀಕಿಸಿದರು. ಕಾಂಗ್ರೆಸ್ ಪ್ರೋತ್ಸಾಹಿಸಲು ಬಯಸಿದ ವಿದೇಶಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ತಡೆಯಲು ಅಥವಾ ನಿರುತ್ಸಾಹಗೊಳಿಸಲು ಈ ಇಲಾಖೆಯು ಪ್ರಯತ್ನಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪಿಎಚ್ಡಿ ಕಾರ್ಯಕ್ರಮಗಳಂತಹ ದೀರ್ಘಕಾಲದ ಅಧ್ಯಯನಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದನ್ನು, ಜಂಟಿ ಪದವಿಗಳನ್ನು ಪಡೆಯುವುದನ್ನು ಮತ್ತು ತಮ್ಮ ಶೈಕ್ಷಣಿಕ ವಿಷಯವನ್ನು ಬದಲಾಯಿಸುವುದನ್ನು ಈ ನೀತಿಯು ನಿಷೇಧಿಸುತ್ತದೆ ಎಂದು ಅವರು ಹೇಳಿದರು.
ಹೊಸ ವೀಸಾ ನಿಯಮಗಳು ಸೆಪ್ಟೆಂಬರ್ನಲ್ಲಿ ಜಾರಿಗೆ ಬರಬೇಕಿತ್ತು, ಆದರೆ ನ್ಯಾಯಪೀಠವು ಅವುಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಟ್ರಂಪ್ ಆಡಳಿತವು ಈಗಾಗಲೇ ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ.
ಅಮೆರಿಕದಲ್ಲಿ ಪ್ರಸ್ತುತ ಲಕ್ಷಾಂತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿದ್ದು, ಇವರಲ್ಲಿ ಭಾರತದ 3.31 ಲಕ್ಷ ವಿದ್ಯಾರ್ಥಿಗಳೂ ಸೇರಿದ್ದಾರೆ.






