ಉಮರ್ ಖಾಲಿದ್ ಗೆ ಜಾಮೀನು ನೀಡಬೇಕು: ನ್ಯಾಯಯುತ, ಸಕಾಲಿಕ ವಿಚಾರಣೆ ನಡೆಸುವಂತೆ ಅಮೆರಿಕದ ಸಂಸದರ ಒತ್ತಾಯ

ಹೊಸದಿಲ್ಲಿ/ವಾಷಿಂಗ್ಟನ್: ಸಾಮಾಜಿಕ ಕಾರ್ಯಕರ್ತ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ಜಾಮೀನು ನೀಡಬೇಕು ಮತ್ತು ಅಂತರರಾಷ್ಟ್ರೀಯ ಕಾನೂನು ಮಾನದಂಡಗಳಿಗೆ ಅನುಗುಣವಾಗಿ ನ್ಯಾಯಯುತ ಹಾಗೂ ಸಕಾಲಿಕ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ಅಮೆರಿಕದ ಸಂಸದರ ಗುಂಪೊಂದು ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ.
ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಕ್ವಾಟ್ರಾ ಅವರಿಗೆ ಉದ್ದೇಶಿಸಿ ಬರೆಯಲಾದ ಈ ಪತ್ರಕ್ಕೆ ಅಮೆರಿಕದ ಸಂಸತ್ ಸದಸ್ಯರಾದ ಜಿಮ್ ಮೆಕ್‌ಗವರ್ನ್ ಮತ್ತು ಜೇಮೀ ರಾಸ್ಕಿನ್ ಸೇರಿದಂತೆ ಎಂಟು ಮಂದಿ ಸಂಸದರು ಸಹಿ ಹಾಕಿದ್ದಾರೆ.
ಫೆಬ್ರವರಿ 2020ರಲ್ಲಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಗಳ ದೀರ್ಘಾವಧಿಯ ಪೂರ್ವ ವಿಚಾರಣಾ ಬಂಧನದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಜನಪ್ರತಿನಿಧಿಗಳು, ಈ ಸಂದರ್ಭದಲ್ಲಿ ವಿಶೇಷವಾಗಿ ಉಮರ್ ಖಾಲಿದ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಖಾಲಿದ್ ಅವರ ಪೋಷಕರನ್ನು ತಾವು ಭೇಟಿಯಾಗಿದ್ದುದಾಗಿ ಜಿಮ್ ಮೆಕ್‌ಗವರ್ನ್ ಪತ್ರದಲ್ಲಿ ಉಲ್ಲೇಖಿಸಿದ್ದು, ವಿಚಾರಣೆ ಆರಂಭವಾಗದೇ ಖಾಲಿದ್ ಅವರು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇರುವುದನ್ನು ಅವರು ಉಲ್ಲೇಖಿಸಿದ್ದಾರೆ.
2020ರ ದಿಲ್ಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಖಾಲಿದ್ ಹಾಗೂ ಇತರ ಹಲವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಜೊತೆಗೆ 1967ರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
“ಅಮೆರಿಕ ಮತ್ತು ಭಾರತ ದೀರ್ಘಕಾಲದಿಂದ ರಾಜತಾಂತ್ರಿಕ ಸಂಬಂಧ ಹಂಚಿಕೊಂಡಿವೆ. ಈ ಸಂಬಂಧವು ಐತಿಹಾಸಿಕವಾಗಿ ಪ್ರಜಾಪ್ರಭುತ್ವ ಮೌಲ್ಯಗಳು, ಸಂವಿಧಾನಾತ್ಮಕ ಆಡಳಿತ ಮತ್ತು ಜನರ ನಡುವಿನ ಸಂಬಂಧಗಳಲ್ಲಿ ಬೇರೂರಿದೆ,” ಎಂದು ಜನಪ್ರತಿನಿಧಿಗಳು ಪತ್ರದಲ್ಲಿ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಸ್ವಾತಂತ್ರ್ಯ, ಕಾನೂನಿನ ಆಳ್ವಿಕೆ, ಮಾನವ ಹಕ್ಕುಗಳು ಮತ್ತು ಬಹುತ್ವವನ್ನು ರಕ್ಷಿಸುವಲ್ಲಿ ಎರಡೂ ದೇಶಗಳು ಆಸಕ್ತಿಯನ್ನು ಹೊಂದಿವೆ ಎಂದೂ ಅವರು ತಿಳಿಸಿದ್ದಾರೆ.
ಉಮರ್ ಖಾಲಿದ್ ಪ್ರಕರಣದಲ್ಲಿ ಹಲವು ಮಾನವ ಹಕ್ಕುಗಳ ಸಂಘಟನೆಗಳು, ಕಾನೂನು ತಜ್ಞರು ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳು ತನಿಖೆ ಹಾಗೂ ಕಾನೂನು ಪ್ರಕ್ರಿಯೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿರುವುದನ್ನೂ ಜನಪ್ರತಿನಿಧಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. UAPA ಅಡಿಯಲ್ಲಿ ಖಾಲಿದ್ ಅವರಿಗೆ ಐದು ವರ್ಷಗಳ ಕಾಲ ಜಾಮೀನು ನಿರಾಕರಿಸಿರುವುದು ಸೂಕ್ತ ಪ್ರಕ್ರಿಯೆ, ಅನುಪಾತ ಮತ್ತು ಸಮಾನತೆ ಕುರಿತ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ಸ್ವತಂತ್ರ ಮಾನವ ಹಕ್ಕುಗಳ ತಜ್ಞರು ಎಚ್ಚರಿಸಿರುವುದನ್ನೂ ಜಿಮ್ ಮೆಕ್‌ಗವರ್ನ್ ಅವರು ಸೂಚಿಸಿದ್ದಾರೆ.
ಈ ವಿಷಯವು ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ಮುಂದಿರುವುದಾಗಿ ತಮಗೆ ತಿಳಿದಿದೆ ಎಂದು ಹೇಳಿರುವ ಅಮೆರಿಕದ ಪ್ರತಿನಿಧಿಗಳು, ಖಾಲಿದ್ ಅವರಿಗೆ ಅವರ ಸಹೋದರಿಯ ವಿವಾಹದಲ್ಲಿ ಭಾಗವಹಿಸಲು ಇತ್ತೀಚೆಗೆ ನೀಡಲಾದ ತಾತ್ಕಾಲಿಕ ಜಾಮೀನು ಆದೇಶವನ್ನು ಸ್ವಾಗತಿಸಿದ್ದಾರೆ. ಅಂತಿಮ ನ್ಯಾಯಾಂಗ ವಿಚಾರಣೆ ಪೂರ್ಣಗೊಳ್ಳುವವರೆಗೆ ಖಾಲಿದ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಗೌರವದೊಂದಿಗೆ ಹಾಗೂ ಅಮೆರಿಕದ ಪ್ರಮುಖ ಪಾಲುದಾರನಾಗಿ ಅದರ ಪಾತ್ರವನ್ನು ಮನಗಂಡು, ಖಾಲಿದ್ ಮತ್ತು ಬಂಧನದಲ್ಲಿರುವ ಅವರ ಸಹ–ಆರೋಪಿಗಳ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಹಂಚಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ,” ಎಂದು ಜಿಮ್ ಮೆಕ್‌ಗವರ್ನ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.







