ಅಮೃತಸರ ತಲುಪಿದ 104 ಅಕ್ರಮ ವಲಸಿಗರಿದ್ದ ಅಮೆರಿಕದ ಮಿಲಿಟರಿ ವಿಮಾನ

Photo | indiatoday.in
ಹೊಸದಿಲ್ಲಿ: ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡಿಪಾರು ಆದೇಶದ ಬಳಿಕ 13 ಮಕ್ಕಳು ಸೇರಿದಂತೆ 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಬುಧವಾರ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಾರಂಭಿಸಿದ ಕಠಿಣ ಕ್ರಮದ ಭಾಗವಾಗಿ ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿತ್ತು.
ಟೆಕ್ಸಾಸ್ ನ ಸ್ಯಾನ್ ಆಂಟೋನಿಯೊದಿಂದ ಹೊರಟ ಸಿ -17 ಯುಎಸ್ ಮಿಲಿಟರಿ ವಿಮಾನ ಬುಧವಾರ ಮಧ್ಯಾಹ್ನ ಶ್ರೀ ಗುರು ರಾಮ್ ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. 79 ಪುರುಷರು ಮತ್ತು 25 ಮಹಿಳೆಯರನ್ನು ಒಳಗೊಂಡಂತೆ 104 ಮಂದಿಯನ್ನು ಸ್ವೀಕರಿಸಲು ಪೊಲೀಸರು ಮತ್ತು ಅಧಿಕಾರಿಗಳು ವಿಮಾನ ನಿಲ್ಧಾಣದಲ್ಲಿ ಹಾಜರಿದ್ದರು.
104 ಮಂದಿ ಅಕ್ರಮ ವಲಸಿಗರಲ್ಲಿ ಹರ್ಯಾಣ ಮತ್ತು ಗುಜರಾತ್ ನ ತಲಾ 33 ಮಂದಿ, ಪಂಜಾಬ್ ನ 30 ಮಂದಿ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ತಲಾ ಮೂವರು ಮತ್ತು ಚಂಡೀಗಢದ ಇಬ್ಬರು ಸೇರಿದ್ದಾರೆ. ಮೂಲಗಳ ಪ್ರಕಾರ, ಗಡೀಪಾರು ಮಾಡಲಾದ ಹೆಚ್ಚಿನ ವ್ಯಕ್ತಿಗಳನ್ನು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.