ಭಾರತದ ಸ್ವಯಂರಕ್ಷಣೆ ಹಕ್ಕನ್ನು ಅಮೆರಿಕ ಬೆಂಬಲಿಸಲಿದೆ: ರಾಜನಾಥ್ ಸಿಂಗ್ಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ಭರವಸೆ

ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆಗಳು | PTI Photo
ಹೊಸದಿಲ್ಲಿ: ಭಾರತದ ಸ್ವಯಂರಕ್ಷಣೆ ಹಕ್ಕು ಹಾಗೂ ಭಯೋತ್ಪಾದನೆ ವಿರುದ್ಧದ ಅದರ ಹೋರಾಟವನ್ನು ಅಮೆರಿಕ ಬೆಂಬಲಿಸಲಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಭರವಸೆ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿರುವ ಬೆನ್ನಿಗೇ ಅವರಿಂದ ಈ ಭರವಸೆ ದೊರೆತಿದೆ.
ಅದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಗೆ ತುಪ್ಪ ಸುರಿಯುತ್ತಿರುವ ರಾಕ್ಷಸ ದೇಶವೆಂಬುದು ಬಯಲಾಗಿದ್ದು, ಈ ಪ್ರಾಂತ್ಯದಲ್ಲಿ ಅಸ್ಥಿರತೆಯುನ್ನುಂಟು ಮಾಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೆಗ್ಸೆತ್ ಅವರಿಗೆ ತಿಳಿಸಿದ್ದಾರೆ.
ಜಗತ್ತು ಇನ್ನು ಮುಂದೆ ಈ ಭಯೋತ್ಪಾದನೆಗೆ ಕುರುಡಾಗಲು ಸಾಧ್ಯವಿಲ್ಲ ಎಂದು ಈ ಮಾತುಕತೆಯ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೆಗ್ಸೆತ್ ಅವರನ್ನುದ್ದೇಶಿಸಿ ಹೇಳಿದರು ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾರತದೊಂದಿಗೆ ಅಮೆರಿಕ ದೃಢವಾಗಿ ನಿಲ್ಲಲಿದೆ ಹಾಗೂ ಭಾರತದ ಸ್ವಯಂರಕ್ಷಣೆ ಹಕ್ಕನ್ನು ಬೆಂಬಲಿಸಲಿದೆ ಎಂದು ಹೆಗ್ಸೆತ್ ಭರವಸೆ ನೀಡಿದರು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ರಕ್ಷಣಾ ಸಚಿವಾಲಯ ತಿಳಿಸಿದೆ.
"ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ಅಮೆರಿಕ ಪ್ರಬಲವಾಗಿ ಬೆಂಬಲಿಸಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ", ಎಂದೂ ಈ ಪೋಸ್ಟ್ನಲ್ಲಿ ತಿಳಿಸಲಾಗಿದೆ.







