ಜೈಲಿನಿಂದ ಬಿಡುಗಡೆ ವಿಳಂಬ | ಆರೋಪಿಗೆ ಉತ್ತರ ಪ್ರದೇಶ ಸರಕಾರದಿಂದ ಐದು ಲಕ್ಷ ರೂ.ಪರಿಹಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಛೀಮಾರಿ ಹಾಕಿದ ಬಳಿಕ ಉತ್ತರ ಪ್ರದೇಶ ಸರಕಾರವು ಜಾಮೀನು ಪಡೆದಿದ್ದರೂ ಜೈಲಿನಿಂದ ಸುಮಾರು ಒಂದು ತಿಂಗಳು ವಿಳಂಬವಾಗಿ ಬಿಡುಗಡೆಗೊಂಡಿದ್ದ ವ್ಯಕ್ತಿಗೆ ಐದು ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಿದೆ.
ವ್ಯಕ್ತಿಯ ವಿರುದ್ಧ ರಾಜ್ಯದ ಮತಾಂತರ ವಿರೋಧಿ ಕಾನೂನಿನ ನಿಬಂಧನೆಗಳಡಿ ಪ್ರಕರಣ ದಾಖಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಎ.29ರಂದು ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ವಿಚಾರಣಾ ನ್ಯಾಯಾಲಯದ ಆದೇಶದ 28 ದಿನಗಳ ವಿಳಂಬದ ಬಳಿಕ ಜೂ.24ರಂದಷ್ಟೇ ಆತನನ್ನು ಘಾಝಿಯಾಬಾದ್ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು.
ಜೂ.25ರಂದು ವಿಳಂಬ ಕುರಿತು ರಾಜ್ಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ವ್ಯಕ್ತಿಗೆ ಐದು ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿತ್ತು ಮತ್ತು ಪಾಲನಾ ವರದಿಯನ್ನು ಸಲ್ಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತ್ತು.
ಸರಕಾರವು ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿದೆ ಮತ್ತು ಪರಿಹಾರವನ್ನು ಪಾವತಿಸಿದೆ ಎಂದು ಶುಕ್ರವಾರ ಸರಕಾರದ ಪರ ವಕೀಲರು ನ್ಯಾಯಮೂರ್ತಿಗಳಾದ ಕೆ.ವಿ.ವಿಶ್ವನಾಥನ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠಕ್ಕೆ ತಿಳಿಸಿದರು.
ಹಣ ಸ್ವೀಕರಿಸಿದ್ದನ್ನು ವ್ಯಕ್ತಿಯ ಪರ ವಕೀಲರು ದೃಢಪಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಎ.29ರಂದು ವ್ಯಕ್ತಿಗೆ ಜಾಮೀನು ಮಂಜೂರು ಮಾಡಿತ್ತು. ಬಳಿಕ ಮೇ 27ರಂದು ಘಾಜಿಯಾಬಾದ್ ನ ವಿಚಾರಣಾ ನ್ಯಾಯಾಲಯವು ಆತನ ಬಿಡುಗಡೆ ಆದೇಶವನ್ನು ಹೊರಡಿಸಿತ್ತು.
ಜೂ.24ರಂದು ವ್ಯಕ್ತಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜೂ.25ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ,ಸ್ವಾತಂತ್ರ್ಯವು ಸಂವಿಧಾನದಡಿ ಖಾತರಿಪಡಿಸಲಾಗಿರುವ ‘ಅತ್ಯಂತ ಅಮೂಲ್ಯ ಹಕ್ಕು’ ಆಗಿದೆ ಎಂದು ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು,ಕ್ಷುಲ್ಲಕ ಕಾರಣದಿಂದಾಗಿ ಆ ವ್ಯಕ್ತಿಯು ಕನಿಷ್ಠ 28 ದಿನಗಳ ಕಾಲ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾನೆ ಎಂದು ಕುಟುಕಿತ್ತು.
ಜಾಮೀನು ಆದೇಶದಲ್ಲಿ ಉತ್ತರ ಪ್ರದೇಶ ಕಾನೂನು ಬಾಹಿರ ಮತಾಂತರ ನಿಷೇಧ ಕಾಯ್ದೆ, 2021ರ ನಿಬಂಧನೆಯ ಉಪ ಕಲಮ್ನ್ನು ಉಲ್ಲೇಖಿಸದ್ದಕ್ಕಾಗಿ ಬಿಡುಗಡೆಯಲ್ಲಿ ವಿಳಂಬಕ್ಕೆ ತೀವ್ರ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು.
2021ರ ಕಾಯ್ದೆಯ ಕಲಂ 5ರ ಉಪಕಲಂ(1)ನ್ನು ನಿರ್ದಿಷ್ಟವಾಗಿ ಸೇರಿಸಲು ಎ.29ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಆರೋಪಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ.
ವಿಳಂಬದ ಹಿಂದಿನ ಕಾರಣ ಕುರಿತು ಘಾಝಿಯಾಬಾದ್ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಆದೇಶಿತ್ತು.
ಜೂ.25ರಂದು ವಿಚಾರಣಾ ನ್ಯಾಯಾಯಲದ ಮೇ 29ರ ಆದೇಶವು 2021ರ ಕಾಯ್ದೆಯ ಕಲಂ 5ರ ಉಪ ಕಲಂ(1)ನ್ನು ಹೊರತುಪಡಿಸಿ ಎಲ್ಲ ವಿವರಗಳನ್ನು ಉಲ್ಲೇಖಿಸಿತ್ತು. ಹೀಗಾಗಿ ಜೈಲು ಅಧಿಕಾರಿಗಳು ಮೇ 28ರಂದು ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಸರಕಾರದ ಪರ ವಕೀಲರು ತಿಳಿಸಿದ್ದರು.







