Uttar Pradesh | ಪತ್ನಿ, ಪುತ್ರ, ಇಬ್ಬರು ಅರ್ಚಕರ ಹತ್ಯೆ : ಮೂವರು ಮಕ್ಕಳನ್ನು ಒತ್ತೆಯಾಳಾಗಿರಿಸಿದ ವ್ಯಕ್ತಿ
ಪೊಲೀಸ್ ಎನ್‌ಕೌಂಟರ್‌ನಲ್ಲಿ ಆರೋಪಿ ಮೃತ್ಯು , ಇಬ್ಬರು ಮಕ್ಕಳ ರಕ್ಷಣೆ

ಲಕ್ನೋ : ಪತ್ನಿ, ಪುತ್ರ ಹಾಗೂ ಇಬ್ಬರು ಅರ್ಚಕರನ್ನು ಗುಂಡಿಕ್ಕಿ ಹತ್ಯೆ ಮಾಡಿ, ತನ್ನ ಮೂವರು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯೊಬ್ಬನು ಎಂಟು ಗಂಟೆಗಳ ಕಾಲ ಒತ್ತೆಯಾಲಾಗಿ ಇರಿಸಿದ್ದ ಘಟನೆ ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದಿದೆ.
ಬಳಿಕ ನಡೆದ ಬುಧವಾರ ಮುಂಜಾನೆ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಆರೋಪಿಯು ಹತನಾಗಿದ್ದು , ಒತ್ತೆಯಾಳಾಗಿ ಇರಿಸಿದ್ದ ಮೂವರು ಮಕ್ಕಳಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಆರೋಪಿಯನ್ನು ಅರವಿಂದ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ಅರ್ಚಕರಲ್ಲಿ ಒಬ್ಬರನ್ನು ಮಹೇಂದ್ರ ಪಾಠಕ್ ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಶಂಭುಪುರ ಗ್ರಾಮದಲ್ಲಿರುವ ಸಿಂಗ್ನ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆತ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಆತನ ಪತ್ನಿ ಬಬಿತಾ ಹಾಗೂ ವಿಧಿವಿಧಾನಗಳನ್ನು ನೆರವೇರಿಸಲು ಆಗಮಿಸಿದ್ದ ಇಬ್ಬರು ಅರ್ಚಕರು ಮೃತಪಟ್ಟಿದ್ದಾರೆ. ಸಿಂಗ್ನ ಸಹೋದರನ ಸಾವಿನ ಹಿನ್ನೆಲೆಯಲ್ಲಿ ಈ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪೂಜೆ ನಡೆಯುತ್ತಿದ್ದ ವೇಳೆ ಮನೆಗೆ ಬಂದ ಸಿಂಗ್, ಅರ್ಚಕರು ಉಪಸ್ಥಿತರಿದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಬಳಿಕ ನಡೆದ ವಾಗ್ವಾದದ ನಡುವೆ ಆತ ಗುಂಡು ಹಾರಿಸಿದ್ದು, ಆತನ ಪತ್ನಿ ಹಾಗೂ ಇಬ್ಬರು ಅರ್ಚಕರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆದ ವೇಳೆ ಸ್ಥಳದಲ್ಲಿದ್ದ ಇತರ ಇಬ್ಬರು ಅರ್ಚಕರು ಮನೆಯಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡಿನ ದಾಳಿಯ ಬಳಿಕ ಸಿಂಗ್ ತನ್ನ ಮೂವರು ಮಕ್ಕಳೊಂದಿಗೆ ಬಂದೂಕು ಹಿಡಿದುಕೊಂಡು ಮನೆಯೊಳಗೆ ಬಾಗಿಲು ಹಾಕಿಕೊಂಡಿದ್ದರಿಂದ ಸುಮಾರು ಎಂಟು ಗಂಟೆಗಳ ಕಾಲ ಬಿಕ್ಕಟ್ಟು ಸೃಷ್ಟಿಯಾಯಿತು. ಪೊಲೀಸರು ಮನೆಯನ್ನು ಸುತ್ತುವರಿದು, ಶರಣಾಗುವಂತೆ ಹಾಗೂ ಮಕ್ಕಳನ್ನು ಬಿಡುಗಡೆ ಮಾಡುವಂತೆ ಪದೇಪದೇ ಮನವಿ ಮಾಡಿದರು.
ಸಿಂಗ್ ಸುರಕ್ಷಿತವಾಗಿ ಹೊರಬರುವಂತೆ ಮನವೊಲಿಸಲು ಆತನ ಕುಟುಂಬಸ್ಥರ ನೆರವನ್ನೂ ಪಡೆಯಲಾಗಿತ್ತು. ಆದರೆ ಸಿಂಗ್ ಪೊಲೀಸರಿಗೂ ಹಾಗೂ ಕುಟುಂಬಸ್ಥರಿಗೂ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಮಕ್ಕಳನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದ ಎಂದು ಅಜಂಗಢ ಎಸ್ಎಸ್ಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಸುಮಾರು ಎಂಟು ಗಂಟೆಗಳ ಕಾಲ ಪೊಲೀಸರು ಮನೆಯ ಸುತ್ತಲೂ ಕಾವಲು ಕಾಯುತ್ತಾ ಸಂಧಾನಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಮನೆಯೊಳಗಿಂದ ಗುಂಡಿನ ಸದ್ದು ಕೇಳಿಬಂದ ಬಳಿಕ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತು. ಸಿಂಗ್ ತನ್ನ 10 ವರ್ಷದ ಮಗನಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳುತ್ತಿದ್ದಂತೆ ಪೊಲೀಸರು ಮಕ್ಕಳ ರಕ್ಷಣೆಗೆ ಮುಂದಾದರು. ಕಾರ್ಯಾಚರಣೆಯಲ್ಲಿ ಸ್ಟನ್ ಗ್ರೆನೇಡ್ ಹಾಗೂ ಅಶ್ರುವಾಯು ಬಳಸಲಾಯಿತು. ಪೊಲೀಸರು ಸಮೀಪಿಸುತ್ತಿದ್ದಂತೆ ಸಿಂಗ್ ತನ್ನ ಪರವಾನಗಿ ಹೊಂದಿದ್ದ ರಿವಾಲ್ವರ್ನಿಂದ ಆರು ಸುತ್ತು ಗುಂಡುಗಳನ್ನು ಪೊಲೀಸರತ್ತ ಹಾರಿಸಿದ್ದಾನೆ. ಇದಕ್ಕೆ ಪೊಲೀಸರು ಆತ್ಮರಕ್ಷಣೆ ಹಾಗೂ ಮಕ್ಕಳ ರಕ್ಷಣೆಗಾಗಿ ಪ್ರತಿದಾಳಿ ನಡೆಸಿದರು.
ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಸಿಂಗ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಗಾಯಗೊಂಡಿದ್ದ ಆತನ 10 ವರ್ಷದ ಪುತ್ರನನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಕೂಡ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಗ್ನ ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಮೃತ ಪತ್ನಿ ಹಾಗೂ ಇಬ್ಬರು ಅರ್ಚಕರ ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮುಂದಿನ ಕಾನೂನು ಕ್ರಮಗಳು ಪ್ರಗತಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.






