ಉತ್ತರಪ್ರದೇಶ| ದಟ್ಟ ಮಂಜಿನಿಂದ ನೀರು ತುಂಬಿದ್ದ ಹೊಂಡಕ್ಕೆ ಬಿದ್ದ ಕಾರು: ಟೆಕ್ಕಿ ಮೃತ್ಯು

PC: newindianexpress
ನೊಯ್ಡಾ (ಉ.ಪ್ರದೇಶ),ಜ.18: ದಟ್ಟವಾದ ಮಂಜಿನಿಂದಾಗಿ ಕಾರು ಕಾಲುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನೀರು ತುಂಬಿದ್ದ ಆಳವಾದ ಹೊಂಡಕ್ಕೆ ಬಿದ್ದ ಪರಿಣಾಮ ಸಾಫ್ಟವೇರ್ ಇಂಜನಿಯರ್ ಓರ್ವರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಇಲ್ಲಿಯ ಸೆಕ್ಟರ್ 150ರ ಸಮೀಪ ನಡೆದಿದೆ. ಈ ದುರಂತವು ಪ್ರದೇಶದ ನಿವಾಸಿಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ.
ಯುವರಾಜ ಮೆಹ್ತಾ (27) ಮೃತ ಟೆಕ್ಕಿಯಾಗಿದ್ದು,ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸಾವಿನ ಮಡಿಲು ಸೇರಿದ್ದಾರೆ.
ದಟ್ಟವಾದ ಮಂಜು ಮತ್ತು ರಸ್ತೆಯಲ್ಲಿ ರಿಫ್ಲೆಕ್ಟರ್ಗಳ ಅನುಪಸ್ಥಿತಿಯಿಂದಾಗಿ ಅವರ ಕಾರು ಕಾಲುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು 70 ಅಡಿ ಆಳದ ನೀರು ತುಂಬಿದ್ದ ಕಂದಕಕ್ಕೆ ಬಿದ್ದಿತ್ತು. ಮೆಹ್ತಾರ ಕೂಗನ್ನು ಕೇಳಿ ಧಾವಿಸಿ ಬಂದ ಕೆಲವು ದಾರಿಹೋಕರು ನೆರವಿಗೆ ಯತ್ನಿಸಿದ್ದರಾದರೂ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ಕೊನೆಯ ಕ್ಷಣದಲ್ಲಿ ಮೆಹ್ತಾ ತನ್ನ ತಂದೆ ರಾಜಕುಮಾರ್ ಮೆಹ್ತಾ ಅವರಿಗೆ ಮೊಬೈಲ್ ಕರೆಯನ್ನೂ ಮಾಡಿದ್ದರು. ‘ಅಪ್ಪಾ,ನಾನು ನೀರು ತುಂಬಿರುವ ಆಳವಾದ ಹೊಂಡದಲ್ಲಿ ಬಿದ್ದಿದ್ದೇನೆ. ನಾನು ನೀರಿನಲ್ಲಿ ಮುಳುಗುತ್ತಿದ್ದೇನೆ. ದಯವಿಟ್ಟು ಬಂದು ನನ್ನನ್ನು ರಕ್ಷಿಸಿ,ನಾನು ಸಾಯಲು ಬಯಸುವುದಿಲ್ಲ’ ಎಂದು ಬೇಡಿಕೊಂಡಿದ್ದರು.
ಕೆಲವೇ ನಿಮಿಷಗಳಲ್ಲಿ ಸ್ಥಳೀಯ ಪೋಲಿಸರು, ಮುಳಗುತಜ್ಞರು ಮತ್ತು ಎನ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಮೆಹ್ತಾರ ತಂದೆ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು.
ಸುಮಾರು ಐದು ಗಂಟೆಗಳ ಪ್ರಯತ್ನಗಳ ಬಳಿಕ ಮೆಹ್ತಾ ಮತ್ತು ಅವರ ಕಾರನ್ನು ನೀರಿನಿಂದ ಹೊರಗೆ ತೆಗೆಯಲಾಗಿತ್ತಾದರೂ ಆ ವೇಳೆಗಾಗಲೇ ಮೆಹ್ತಾ ಕೊನೆಯುಸಿರೆಳೆದಿದ್ದರು.
ಘಟನೆಯ ಬಳಿಕ ಪೋಲಿಸ್ ದೂರನ್ನು ದಾಖಲಿಸಿರುವ ಮೆಹ್ತಾ ಕುಟುಂಬವು, ಅಧಿಕಾರಿಗಳು ರಿಫ್ಲೆಕ್ಟರ್ಗಳನ್ನು ಅಳವಡಿಸಿರಲಿಲ್ಲ, ಸರ್ವಿಸ್ ರಸ್ತೆಯ ಪಕ್ಕದಲ್ಲಿಯ ಕಾಲುವೆಗಳನ್ನೂ ಮುಚ್ಚಿರಲಿಲ್ಲ. ದಟ್ಟ ಮಂಜಿನ ನಡುವೆ ರಸ್ತೆಯಲ್ಲಿ ರಿಫ್ಲೆಕ್ಟರ್ಗಳ ಅನುಪಸ್ಥಿತಿಯಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿದೆ.
ಪ್ರಕರಣದಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಅಗತ್ಯ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಪೋಲಿಸರು ಹೇಳಿದ್ದಾರೆ.
ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಕೆಲವರು ಪ್ರತಿಭಟನೆಗಳನ್ನು ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ವಿಸ್ ರಸ್ತೆಯಲ್ಲಿ ರಿಫ್ಲೆಕ್ಟರ್ಗಳು ಮತ್ತು ಸೂಚನಾ ಫಲಕವನ್ನು ಅಳವಡಿಸುವಂತೆ ತಾವು ಪದೇ ಪದೇ ಒತ್ತಾಯಿಸಿದ್ದೆವು, ಆದರೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.







