Uttar Pradesh | CEC ಜ್ಞಾನೇಶ್ ಕುಮಾರ್ ನಿವಾಸ ವಿರೂಪಗೊಳಿಸಿದ ಪ್ರಕರಣ : ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು; 6 ಮಂದಿ ಬಂಧನ

Photo Credit : PTI
ಲಕ್ನೋ: ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿವಾಸದ ಗೇಟ್ ಹಾಗೂ ಕಂಪೌಂಡ್ ಗೆ ಬಣ್ಣ ಬಳಿದು ವಿರೂಪಗೊಳಿಸಿದ ಆರೋಪದ ಮೇಲೆ ಸುಮಾರು 20 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೊಲೆಯತ್ನ, ಗಂಭೀರ ಗಾಯ ಉಂಟುಮಾಡುವುದು ಹಾಗೂ ಗಲಭೆ ಸೃಷ್ಟಿಸಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಆಗ್ರಾದ ವಿಜಯನಗರ ಕಾಲನಿಯಲ್ಲಿರುವ ಜ್ಞಾನೇಶ್ ಕುಮಾರ್ ಅವರ ನಿವಾಸದ ಎದುರು ಸೋಮವಾರ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆ ಬಳಿಕ ಸ್ಥಳದಿಂದ ತೆರಳುವ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಮನೆಯ ಗೇಟ್ ಮತ್ತು ಕಂಪೌಂಡ್ ಮೇಲೆ ಕಪ್ಪು ಬಣ್ಣದಿಂದ ಘೋಷಣೆಗಳನ್ನು ಬರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಬ್-ಇನ್ಸ್ಪೆಕ್ಟರ್ ಗೌರವ್ ಗುಪ್ತಾ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಹರಿಪರ್ವತ್ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ಹೆಸರಿಸಲಾದ ವ್ಯಕ್ತಿಗಳು ಹಾಗೂ 15 ರಿಂದ 20 ಮಂದಿ ಅಪರಿಚಿತ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರು ಮಂದಿ ಕಾಂಗ್ರೆಸ್ ಮುಖಂಡರಾದ ಅನಿಲ್ ಯಾದವ್, ಮುಕೇಶ್ ಧಂಗರ್, ಮನೋಜ್ ಗೌರ್, ರಾಜೇಶ್ ಕುಮಾರ್, ರಾಜಾ ಗೌತಮ್ ಮತ್ತು ಪಂಕಜ್ ಚೌಧರಿ ಅವರನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 109 (ಕೊಲೆಯತ್ನ), 121 (ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಗಂಭೀರ ಗಾಯ ಉಂಟುಮಾಡುವುದು), 126 (ಅಕ್ರಮ ತಡೆ), 132 (ಸಾರ್ವಜನಿಕ ನೌಕರನ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 191 (ಕಾನೂನುಬಾಹಿರ ಸಭೆಯಿಂದ ಗಲಭೆ), 333 (ಗಾಯ, ಹಲ್ಲೆ ಅಥವಾ ಅಕ್ರಮ ತಡೆ ಮಾಡುವ ಸಿದ್ಧತೆಯೊಂದಿಗೆ ಅತಿಕ್ರಮ ಪ್ರವೇಶ), 351(2) (ಕ್ರಿಮಿನಲ್ ಬೆದರಿಕೆ) ಹಾಗೂ 352 (ಶಾಂತಿಭಂಗಕ್ಕೆ ಕಾರಣವಾಗುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಮಿತ್ ಸಿಂಗ್ , ಪ್ರಕರಣವನ್ನು ಪ್ರತಿಭಟನೆಗೆ ಸಂಬಂಧಿಸಿದ ಸೆಕ್ಷನ್ಗಳಿಗೆ ಮಾತ್ರ ಸೀಮಿತಗೊಳಿಸಬೇಕಿತ್ತು. ಆದರೆ ಪೊಲೀಸರು ಪಕ್ಷದ ಕಾರ್ಯಕರ್ತರ ವಿರುದ್ಧ ಹಲವು ಸುಳ್ಳು ಸೆಕ್ಷನ್ಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ನಿಯೋಗವು ಬುಧವಾರ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ, ತಮ್ಮ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಆರೋಪಗಳನ್ನು ಕೈಬಿಡುವಂತೆ ಒತ್ತಾಯಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನಾ ಸರಣಿಯ ಭಾಗವಾಗಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.






