Uttar Pradesh | ಕಾಲೇಜು ಎದುರು ಹಾಡಹಗಲೇ ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಸಹಪಾಠಿಗಳು

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರ್ಹಾದ್ ಅಲಿ PC: x.com/KrishnaTOI
ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿನ ಹಿಂದು ಕಾಲೇಜಿನ ಎದುರು ಗುರುವಾರ ಮಧ್ಯಾಹ್ನ 19 ವರ್ಷದ ವಿದ್ಯಾರ್ಥಿಗೆ ಸಹಪಾಠಿಗಳಿಬ್ಬರು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಬಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಆರುಷ್ ಸಿಂಗ್ (21) ಮತ್ತು ಅದೇ ಕಾಲೇಜಿನ ದೀಪಕ್ ಕುಮಾರ್ (20) ಎಂಬವರು, ಬಿಕಾಂ ವಿದ್ಯಾರ್ಥಿ ಫರ್ಹಾದ್ ಅಲಿ ಮೇಲೆ ದಹನಕಾರಿ ವಸ್ತುವನ್ನು ಎರಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಯಿಂದ ಫರ್ಹಾದ್ ಅಲಿ ಅವರ ತೊಡೆ ಭಾಗದಲ್ಲಿ ತೀವ್ರ ಸುಟ್ಟಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆರೋಪಿಗಳು ಘಟನೆಯ ಬಳಿಕ ತಲೆಮರೆಸಿಕೊಂಡಿದ್ದು, ಈ ಹಿಂಸಾತ್ಮಕ ಘಟನೆಯಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕಾಲೇಜು ಕ್ಯಾಂಪಸ್ ಸುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪರೀಕ್ಷಾ ಕೇಂದ್ರದಿಂದ ಫರ್ಹಾದ್ ಅಲಿ ಹೊರಬರುತ್ತಿದ್ದಾಗ, ಕಾಲೇಜು ಗೇಟಿನ ಬಳಿ ದಾಳಿಕೋರರು ಈ ಕೃತ್ಯ ಎಸಗಿದ್ದಾರೆ. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಮತ್ತು ದಾರಿಹೋಕರು ತಕ್ಷಣ ಬೆಂಕಿ ನಂದಿಸಲು ಮುಂದಾಗಿ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.
ಫರ್ಹಾದ್ ಅಲಿಗೆ ಶೇಕಡಾ 8ರಷ್ಟು ಸುಟ್ಟಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೆ ಪೆಟ್ರೋಲ್ ತುಂಬಿದ ಬಾಟಲಿಯನ್ನು ಬಳಸಲಾಗಿದೆ. ಇದು ಪೆಟ್ರೋಲ್ ಬಾಂಬ್ ಆಗಿರುವ ಸಾಧ್ಯತೆ ಇದೆ ಎಂದು ಮೊರದಾಬಾದ್ ವಲಯದ ಎಸ್ಪಿ ರಣವಿಜಯ್ ತಿಳಿಸಿದ್ದಾರೆ.







